Updated: Feb 28
ಪ್ರತಿ ವರ್ಷ ಕರ್ನಾಟಕದ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ, ಕನ್ನಡತಿಯರ ಪಾತ್ರವನ್ನು ಮರೆಯದೇ ಸ್ಮರಿಸುವ ಆಶಯದಿಂದ 2017 ರಲ್ಲಿ “ಅವಳ ಹೆಜ್ಜೆ” ಯ ವತಿಯಿಂದ ಪ್ರಾರಂಭಿಸಿದ ವಾರ್ಷಿಕ ಹಬ್ಬ “ಕನ್ನಡತಿ ಉತ್ಸವ”.
ಮೇಲ್ನೋಟಕ್ಕೆ ಎದ್ದು ಕಾಣದಿದ್ದರೂ, ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಹಾಸುಹೊಕ್ಕಾಗಿರುವುದನ್ನು ಯಾರೂ ಅಲ್ಲಗಳೆಯಲಾರರು. ಹೀಗಾಗಿ ನಮ್ಮ ಸುತ್ತಮುತ್ತಲಿನ ಮಹಿಳೆಯರ ಕಥೆಗಳನ್ನು, ಅನುಭವಗಳನ್ನು ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ಮೇಲ್ನೋಟಕ್ಕೆ ತರಲು ಒಂದು ವೇದಿಕೆ ಒದಗಿಸುವ ಮತ್ತು ಆ ಮೂಲಕ ಸಮಾನತೆಯತ್ತ ಪುಟ್ಟ ಹೆಜ್ಜೆಗಳನ್ನು ಇಡುವ ಪ್ರಯತ್ನ ನಮ್ಮದು.
2017 ರಿಂದ 2022 ರವರೆಗೆ ನಡೆದ ಕನ್ನಡತಿ ಉತ್ಸವದ ಸಂಕ್ಷಿಪ್ತ ವಿವರಣೆ:
ಕನ್ನಡತಿ ಉತ್ಸವ-2017 - “ಕನ್ನಡತಿಯ ಹೆಜ್ಜೆ” ಎಂಬ ಶೀರ್ಷಿಕೆಯಡಿಯಲ್ಲಿ, 3 ದಿನಗಳ ಕಾಲ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ “ರಂಗೋಲಿ – ಮೆಟ್ರೊ ಆರ್ಟ್ ಸೆಂಟರ್” ನ “ವಿಸ್ಮಯ” ಗ್ಯಾಲರಿಯಲ್ಲಿ ಚಿತ್ರಕಲಾಕೃತಿ, ಕವಿತೆ, ಲೇಖನ, ಕಿರುಚಿತ್ರಗಳು, ಪ್ರದರ್ಶನ ಕಲೆ ಸೇರಿದಂತೆ 40ಕ್ಕೂ ಹೆಚ್ಚು ಕಲಾವಿದೆಯರ ಸ್ತ್ರೀಕೇಂದ್ರಿತ ಕೃತಿಗಳನ್ನು ಪ್ರದರ್ಶಿಸಲಾಗಿತ್ತು.
ಕನ್ನಡತಿ ಉತ್ಸವ-2018 - ನನ್ನದೊಂದು ಕಥೆ ಎಂಬ ಶೀರ್ಷಿಕೆಯಡಿಯಲ್ಲಿ ಮಹಿಳೆಯರೇ ತಯಾರಿಸಿದ ಈ ಕೆಳಕಂಡ 7 ಕಿರುಚಿತ್ರಗಳ ಪ್ರದರ್ಶನ, ಚರ್ಚಾಗೋಷ್ಠಿ ಮತ್ತು ಸಂವಾದ ಏರ್ಪಡಿಸಲಾಗಿತ್ತು.
ದರೋಜಿ – ರಚನೆ ಹಾಗು ನಿರ್ದೇಶನ, ಸುಗಂಧಿ ಗದಾಧರ
ಅಪ್ರಾಪ್ತ – ರಚನೆ ಹಾಗು ನಿರ್ದೇಶನ, ಕ್ಷೇಮಾ ಬಿ ಕೆ
ಜೀವನ ರೇಖೆ – ರಚನೆ ಹಾಗು ನಿರ್ದೇಶನ, ಸವಿತಾ ಇನಾಂದಾರ್
ಕಾಜಿ – ರಚನೆ ಹಾಗು ನಿರ್ದೇಶನ, ಐಶನಿ ಶೆಟ್ಟಿ
ದಾಳಿ – ನಿರ್ದೇಶನ, ಮೇದಿನಿ ಕೆಳಮನೆ
ಅನಲ, ನಿರ್ದೇಶನ, ಸಂಜ್ಯೋತಿ ವಿ ಕೆ
ಬೆಳ್ಳಿ ತಂಬಿಗೆ – ನಿರ್ಮಾಪಕ ತಂಡ: ಮಹಿಮಾ ಗೌಡ, ಅನುಶ್ರೀ ಭರದ್ವಾಜ, ಹರಿಪ್ರಿಯಾ ಕೆ ರಾವ್, ಶ್ರದ್ಧಾ ಸುಮನ್
ಬೆಂಗಳೂರಿನ ಗಾಂದಿಭವನದಲ್ಲಿ ಯಶಸ್ವಿಯಾಗಿ ಉದ್ಘಾಟಿಸಿ, ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ವಿಜಯಪುರದ ಅಕ್ಕ ಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ, ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಸಹಾ ಪ್ರದರ್ಶನ ಮತ್ತು ಸಂವಾದ ನಡೆಸಲಾಯಿತು.
ಕನ್ನಡತಿ ಉತ್ಸವ-2019 - ಸ್ತ್ರೀ ನೋಟ ವಿಷಯಾಧಾರಿತ ಮಹಿಳಾ ಪ್ರಧಾನ, ಮಹಿಳೆಯರಿಂದಲೇ ರಚಿತವಾದ ಮತ್ತು ನಿರ್ದೇಶಿಸಲ್ಪಟ್ಟ ರಾಜ್ಯಮಟ್ಟದ ಅಂತರ-ಕಾಲೇಜು ಕಿರುನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕನ್ನಡತಿ ಉತ್ಸವ-2020 - ಅನಿರೀಕ್ಷಿತ ಜಾಗತಿಕ ದುರಂತದ ಹಿನ್ನೆಲೆಯಲ್ಲಿ, ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂಬ ಶೀರ್ಷಿಕೆಯಡಿ ಮಹಿಳಾ ನಾಯಕತ್ವದ ಹಾದಿಯಲ್ಲಿನ ಹಲವಾರು ಸವಾಲುಗಳು ಮತ್ತು ಯಶಸ್ಸುಗಳ ಕುರಿತಂತೆ, ಮೂರು ದಿನಗಳ ವೆಬಿನಾರ್ ಸಮಾವೇಶ ಏರ್ಪಡಿಸಲಾಗಿತ್ತು.
ಕನ್ನಡತಿ ಉತ್ಸವ-2021 - "ಆಧುನಿಕ ಬೊಂಬೆ ಹಬ್ಬ" ಶೀರ್ಷಿಕೆಯಡಿಯಲ್ಲಿ ಸಮಕಾಲೀನ ಸಾಧಕಿಯರ ಸ್ಪೂರ್ತಿದಾಯಕ ಕಥೆಗಳನ್ನು ಬೊಂಬೆ ಜೋಡಣೆ ಮೂಲಕ ಪ್ರದರ್ಶನ, ಕಾರ್ಟೂನ್ ಗೊಂಬೆಗಳ ವಿಡಿಯೋ (ಅನಿಮೇಷನ್) ಹಾಗೂ ಮಕ್ಕಳಿಂದ "ನನ್ನ ಮೆಚ್ಚಿನ ಮಹಿಳೆ" ಶೀರ್ಷಿಕೆಯಡಿ ವೇಷಭೂಷಣ ಪ್ರದರ್ಶನ ನಡೆಸುವ ಮೂಲಕ ರಾಯಚೂರಿನಲ್ಲಿ ಆಚರಿಸಲಾಗಿತ್ತು.
ಕನ್ನಡತಿ ಉತ್ಸವ-2022 - ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅತ್ಯಂತ ವಿಭಿನ್ನವೂ ವಿನೂತನವೂ ಆದ ʼಮಿಸ್ ಮಹಾಲಕ್ಷ್ಮೀʼ ರ್‍ಯಾಂಪ್ ವಾಕ್ ಏರ್ಪಡಿಸಲಾಗಿತ್ತು. ಇದರಲ್ಲಿ ಮಹಿಳೆಯರು ತಮ್ಮ ತಮ್ಮ ಕನಸು, ಕಸುಬು ಮತ್ತು ಕಲೆಯನ್ನು ವಿವಿಧ ಉಡುಗೆ ತೊಡುಗೆಗಳ ಮೂಲಕ PASSION SHOW (ಇದು ಫ್ಯಾಷನ್ ಶೋ ಅಲ್ಲ, ಪ್ಯಾಷನ್ ಶೋ!) ಪ್ರದರ್ಶಿಸಿದರು. ಇದರೊಂದಿಗೆ, ʼಹಳೆ ಬೇರು ಹೊಸ ಚಿಗುರುʼ ಶೀರ್ಷಿಕೆಯಡಿ ಒಂದೇ ಕುಟುಂಬದ ಮಹಿಳೆಯರು - ಅಜ್ಜಿ, ತಾಯಿ, ಮಗಳು, ಮೊಮ್ಮಗಳು ಹೀಗೆ ಹೆಣ್ಣು ತಲೆಮಾರು - ರ‍್ಯಾಂಪ್ ವಾಕ್ ಮೂಲಕ ತಮ್ಮ ಬಾಂಧವ್ಯವನ್ನು ಪ್ರದರ್ಶಿಸಿದರು.