top of page

ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ


ನಾಲ್ಕನೇ ವರ್ಷದ ಕನ್ನಡತಿ ಉತ್ಸವವನ್ನು ಅನಿರೀಕ್ಷಿತ ಜಾಗತಿಕ ದುರಂತದ ಹಿನ್ನೆಲೆಯಲ್ಲಿ, ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂಬ ಶೀರ್ಷಿಕೆಯಡಿ ಮಹಿಳಾ ನಾಯಕತ್ವದ ಹಾದಿಯಲ್ಲಿನ ಹಲವಾರು ಸವಾಲುಗಳು ಮತ್ತು ಯಶಸ್ಸುಗಳ ಕುರಿತಂತೆ, ನವೆಂಬರ್ 6 ರಿಂದ 8 ರವರೆಗೆ ಮೂರು ದಿನಗಳ ವೆಬಿನಾರ್ ಸಮಾವೇಶದೊಂದಿಗೆ ಆಚರಿಸಲಾಯಿತು.


ಸಿಂಗಾಪುರದ ಪೇಪಾಲ್ ಸಂಶ್ಥೆಯ ಪ್ರಿನ್ಸಿಪಾಲ್ ಪ್ರೊಗ್ರಾಮ್ ಮ್ಯಾನೇಜರ್, ಹೊರನಾಡ ಕನ್ನಡತಿ ವೈಶಾಲಿ ಪಾಂಡಿಯವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ರಾಜ್ಯದ ಬೇರೆ ಬೇರೆ ಕ್ಷೇತ್ರದ ಹತ್ತು ಸಾಧಕಿಯರು ಪಾಲ್ಗೊಂಡಿದ್ದು ಹಲವಾರು ವಿಷಯಗಳನ್ನು ಹಂಚಿಕೊಂಡರು.




ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ. ಎಚ್ ಎಮ್ ಹೇಮಲತಾರವರು “ವಲಸೆ ಮಹಿಳೆಯರು” ಕುರಿತಂತೆ ವಿಷಯ ಮಂಡನೆ ಮಾಡುತ್ತಾ, ಸಮಾಜದ ಕೆಳಸ್ಥರದಲ್ಲಿ ಕುಟುಂಬ ಕಟ್ಟುವ, ಬಡತನದ ಜೊತೆಗೆ ಹೋರಾಡುತ್ತಲೇ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸುವ ವಲಸೆ ಮಹಿಳೆಯರ ಗಟ್ಟಿತನದ ಬಗ್ಗೆ ಮಾತನಾಡಿದರು.


ವೃತ್ತಿಪರ ಕೌನ್ಸಿಲರ್ ವಂದನಾ ಶಾಸ್ತ್ರಿಯವರು “ಮಹಿಳೆಯರಲ್ಲಿ ಸಾಮರ್ಥ್ಯದ ಪ್ರೇರಣೆ” ಎಂಬ ವಿಷಯವನ್ನು ಮಂಡಿಸುತ್ತಾ ಸ್ತ್ರೀಯರಲ್ಲಿ ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಮತ್ತು ಇಚ್ಛಾಶಕ್ತಿ ಎನ್ನುವ ತ್ರಿಶಕ್ತಿ ಸೂತ್ರದ ಬಗ್ಗೆ ಮಾತನಾಡಿದರು.


ಉದಯೋನ್ಮುಖ ಫೋಟೋಗ್ರಾಫರ್ ನವ್ಯಾ ಕಡಮೆಯವರು “ಫೋಟೋಗ್ರಫಿ ಜರ್ನಿ” ಎಂಬ ವಿಷಯವನ್ನೂ ಹಂಚಿಕೊಳ್ಳುತ್ತಾ ಮುಟ್ಟಿನ ಕಾರಣಕ್ಕೆ, ದೂರ ಪ್ರವಾಸದ ಕಾರಣಕ್ಕೆ ಹೆಣ್ಣುಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹತ್ತಿಕ್ಕುವ ಅಗತ್ಯವಿಲ್ಲ, ವಿಜ್ಞಾನ ತುಂಬಾ ಮುಂದುವರೆದಿದೆ, ಅದರ ಜೊತೆಗೇ ಹೆಣ್ಣು ವ್ಯಕ್ತಿಯಾಗಿ ಮುನ್ನಡೆಯಬೇಕು, ಎಂದು ಮಾತನಾಡಿದರು.


ಈ ಭಾನುವಾರ ಪತ್ರಿಕೆಯ ಸಹ ಸಂಪಾದಕಿ ಕುಶಲ ಸ್ವಾಮಿ ಯವರು “ಭಾರತದ ಮಹಿಳಾ ಮುಖ್ಯ ಮಂತ್ರಿಗಳು” ಎನ್ನುವ ವಿಷಯವನ್ನು ಮಂಡಿಸಿದರು. ಇದುವರೆಗೂ ಭಾರತದಲ್ಲಿ ಕೇವಲ 16 ಜನ ಮಹಿಳಾ ಮುಖ್ಯಮಂತ್ರಿಗಳಾಗಿದ್ದು, ಅದೂ ಸಹ ತುಂಬಾ ಜನರ ಗಮನಕ್ಕೂ ಬರದೇ ಇರದಿದ್ದುದು ಬಹಳ ಖೇದಕರ ವಿಷಯ. ಕರ್ನಾಟಕದಲ್ಲಿ ಈವರೆಗೂ ಒಬ್ಬ ಮಹಿಳೆಯೂ ಮುಖ್ಯ ಮಂತ್ರಿ ಗದ್ದುಗೆ ಏರದೇ ಇರುವುದು ಇಲ್ಲಿನ ಪುರುಷ ಪ್ರಧಾನ ಧೋರಣೆಯ ಹಂತವನ್ನು ನಮ್ಮ ಗಮನಕ್ಕೆ ತರುತ್ತದೆ ಎಂದು ವಿಷಾದ ವ್ಯಕ್ತ ಪಡಿಸಿದರು.


ಹಾವೇರಿಯ ಜನಪದ ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ರಾಜೇಶ್ವರಿ ರವಿ ಸಾರಂಗಮಠರವರು ಸಾಧಿಸುವ ಛಲ ಒಂದಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಮಾತನಾಡುತ್ತಾ ಅಂಗವಿಕಲರು, ಖೈದಿಗಳು ಮತ್ತು ಲಾಂಬಾಣಿ ತಾಂಡದವರ ಬದುಕಿನಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾ, ಜೀವನ ಶೈಲಿ ಮತ್ತು ಆರ್ಥಿಕವಾಗಿ ಸಬಲರಾಗುವಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸ ಹೇಗೆ ನೆರವಾಗುತ್ತಿದೆ ಎಂಬುದರ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.


ವಿಸ್ತಾರ ಫೌಂಡೇಷನ್ನಿನ ಚಿನ್ಮಯೀ ಪ್ರವೀಣ್ ರವರು “ವಾಣಿಜ್ಯೋದ್ಯಮದಲ್ಲಿ ಮಹಿಳೆಯರು” ಎನ್ನುವ ವಿಷಯ ಮಂಡಿಸುತ್ತಾ, ಮಹಿಳೆ ಮತ್ತು ಪುರುಷರು ಜೈವಿಕವಾಗಿ ವಿಭಿನ್ನ ಲಕ್ಷಣ ಉಳ್ಳವರಾಗಿದ್ದರೂ ಆಂತರಿಕ ಕೌಶಲ್ಯತೆಯಲ್ಲಿ, ಸೃಜನೆಶೀಲತೆಯಲ್ಲಿ, ಸಾಮರ್ಥ್ಯದಲ್ಲಿ ಆತ್ಮಸ್ವರೂಪಿಗಳು ಎಂದು ಮನ ಮುಟ್ಟುವ ಮಾತುಗಳನ್ನಾಡಿದರು.


ಪತ್ರಕರ್ತೆ, ಆಪ್ತ ಸಮಾಲೋಚಕಿ ಡಿ ಯಶೋಧಾರವರು ವಿಷಯ ಮಂಡನೆ ಮಾಡುತ್ತಾ “ಹೆಣ್ಣಿನ ಹೋರಾಟದ ಮನಸ್ಥಿತಿಯೇ, ಆಕೆಗೆ ನಿಜವಾದ ಚೈತನ್ಯ, ಆಕೆಗೆ ಬಾಹ್ಯ ಪ್ರೇರಣೆಗಳಿಗಿಂತ ಆಂತರಿಕ ಚೇತನವೇ ಶ್ರೀರಕ್ಷೆ” ಎಂದು ತಿಳಿಸಿದರು.


ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಧ್ಯಾಪಕಿ ಡಾ.ರೇಣುಕಾ ಮಂದ್ರೂಪರವರು ಜನವಾದಿ ಸಂಘಟನೆಯ ದೇವಿಯವರ ಹೋರಾಟಗಳು ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡುತ್ತಾ ಸಾವಿತ್ರಿಬಾಯಿ ಫುಲೆಯವರ ಜೀವನಾದರ್ಶದ ಬಗ್ಗೆಯೂ ಪ್ರಸ್ತಾಪಿಸಿದರು.


ಲೇಖಕಿ, ಕವಯತ್ರಿ ಮಮತಾ ಅರಸೀಕೆರೆಯವರು ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳೆಯರು ಆರ್ಥಿಕವಾಗಿ ಚೇತರಿಸಿಕೊಳ್ಳಲು, ಕುಟುಂಬವನ್ನು ಸರಿದೂಗಿಸಲು ಹೇಗೆ ಆನ್ ಲೈನ್ ಮಾರುಕಟ್ಟೆಯನ್ನು ಕಟ್ಟಿಕೊಂಡರು ಎಂಬುದರ ಅನುಭವವನ್ನು ಹಂಚಿಕೊಂಡರು.


ಕುಂಚ ಕಲಾವಿದೆ, ಕವಯತ್ರಿ ಶಾಂತಿವಾಸುರವರು ತಮ್ಮ ಸ್ವಂತ ಬದುಕನ್ನೇ ಮಾದರಿಯಾಗಿ, ತಾವು ಚಿತ್ರ ಕಲಾವಿದೆಯಾಗಿ, ಒಂದು ಶಾಲೆಯನ್ನು ಕಟ್ಟಿ ತಮ್ಮ ಪ್ರತಿಭೆಯ ಜೊತೆಜೊತೆಗೇ ಹಲವಾರು ಕಲಾವಿದರಿಗೆ ವೇದಿಕೆಯನ್ನು ನಿರ್ಮಿಸಿದರ ಬಗ್ಗೆ ಹಂಚಿಕೊಂಡರು.


ಅವಳಹೆಜ್ಜೆಯ ಮೊದಲ ಮತ್ತು ಪ್ರಮುಖ ಉದ್ದೇಶ ಮಹಿಳೆಯರ ಕಥೆಗಳನ್ನು ಮುಂಚೂಣಿಗೆ ತರುವುದು, ಗುರುತಿಸುವುದು ಮತ್ತು ಹಿನ್ನೆಲೆಗೆ ಮರೆಯಾಗದಂತೆ ತಡೆಯುವುದು. ಈ ನಿಟ್ಟಿನಲ್ಲಿ, ಈ ವರ್ಷ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಹಲವಾರು ಮಹಿಳಾ ನಾಯಕಿಯರು, ಸಾಧಕಿಯರು ತಮ್ಮ ಮತ್ತು ತಮ್ಮ ಸುತ್ತಮುತ್ತಲಿನ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳಲು ಕನ್ನಡತಿ ಉತ್ಸವ ಸಾಕ್ಷಿಯಾಗಿತ್ತು.


ಮೂರನೇ ವರ್ಷದ ಕನ್ನಡತಿ ಉತ್ಸವದ ನಿಮಿತ್ತ ಸ್ತ್ರೀ ನೋಟ ವಿಷಯಾಧಾರಿತ ಮಹಿಳಾ ಪ್ರಧಾನ, ಮಹಿಳೆಯರಿಂದಲೇ ರಚಿತವಾದ ಮತ್ತು ನಿರ್ದೇಶಿಸಲ್ಪಟ್ಟ ರಾಜ್ಯಮಟ್ಟದ ಅಂತರ-ಕಾಲೇಜು ಕಿರುನಾಟಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕರ್ನಾಟಕದ ಹಲವಾರು ಕಾಲೇಜುಗಳು ನೋಂದಾಯಿಸಿ ಕೊಂಡಿದ್ದವು. ಮೊದಲ ಹಂತದಲ್ಲಿ ಆಡಿಷನ್ ಮೂಲಕ ಕಾಲೇಜುಗಳನ್ನು ಆಯ್ಕೆ ಮಾಡಲಾಗಿತ್ತು. ಅಂತಿಮ ಸುತ್ತಿಗೆ ಅರ್ಹತೆ ಪಡೆದ ನಾಲ್ಕು ತಂಡಗಳು ನವೆಂಬರ್ ಮೂರರಂದು ಸುಚಿತ್ರಾ ಫಿಲ್ಮ್ ಸೊಸೈಟಿಯ ನಾಣಿ ಅಂಗಳದಲ್ಲಿ ಜರುಗಿದ ಕನ್ನಡತಿ ಉತ್ಸವದಲ್ಲಿ ಪ್ರದರ್ಶನ ನೀಡಿದ್ದವು.


ಕಾರ್ಯಕ್ರಮದ ಉದ್ಘಾಟನೆಯನ್ನು ‘ನಾತಿಚರಾಮಿ’ ಖ್ಯಾತಿಯ ಶರಣ್ಯಾರವರು ನೆರವೇರಿಸಿದ್ದರು. ಸಾಹಿತಿ, ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕರಾದ ಬಿ.ಸುರೇಶರವರು ಸಹ ಉಪಸ್ಥಿತರಿದ್ದರು.


ಉದ್ಘಾಟನೆಯ ನಂತರ ಕವಯತ್ರಿ ಅನುರಾಧ ತುಳಸಿಯವರು ‘ಸ್ತ್ರೀನೋಟದ ಗೀಗಿಪದ’ವನ್ನು ರಚಿಸಿ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಲವಲವಿಕೆಯನ್ನು ಕಟ್ಟಿಕೊಟ್ಟರು. ನಂತರ ಕಿರುನಾಟಕಸ್ಪರ್ಧೆ ಆರಂಭವಾಯಿತು.


ಪ್ರಥಮ ಬಹುಮಾನವನ್ನು ಬೇಲೂರು ರಘುನಂದನ್ ರವರ ಮಾರ್ಗದರ್ಶನದಲ್ಲಿ ವಿಜಯನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ದೀಪಿಕಾ ರವರ ನಿರ್ದೇಶನದಲ್ಲಿ ಮೂಡಿಬಂದ ತಾಯಿಮಗಳು ಎಂಬ ಮಂಗಳಮುಖಿಯೋರ್ವಳ ತಾಯಿಹೃದಯದ ಸೂಕ್ಷ್ಮ ಕಥಾವಸ್ತುವುಳ್ಳ ಕಿರುನಾಟಕವು ಪಡೆಯಿತು.


ದ್ವಿತೀಯ ಬಹುಮಾನವನ್ನು ಹೆಜ್ಜೆ ರಂಗತಂಡದ ಕವಿತಾಬಾಯಿ ಎಲ್ ಬಿ ರವರ ನಿರ್ದೇಶನದಲ್ಲಿ ಮತ್ತು ಸಹಪಾಠಿಗಳ ಮಾರ್ಗದರ್ಶನದಲ್ಲಿ ರಚಿತವಾದ ಮಹಿಳಾ ಉದ್ಯೋಗಿಗಳಿಗೆ ಎದುರಾಗುವ ಸವಾಲುಗಳನ್ನೊಳಗೊಂಡ ನಾಟಕ ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ಪಡೆಯಿತು.


ಪೀಣ್ಯಾ ಪ್ರಥಮದರ್ಜೆ ಕಾಲೇಜಿನ ಪ್ರಾದ್ಯಾಪಕಿ ಶ್ರುತಿ ತಲನೇರಿಯವರ ಮಾರ್ಗದರ್ಶನದಲ್ಲಿ ಶ್ವೇತಾ ಕೆ ಎಸ್ ಮತ್ತು ಸೌಮ್ಯ ಜೆ ರವರ ಸಹಭಾಗಿತ್ವದಲ್ಲಿ, ರಚಿತವಾದ ದನಿ ಎಂಬ ಕುಟುಂಬದ ಒಳಗೇ ಜರುಗುವಂತ ಹೆಣ್ಣುಮಕ್ಕಳ ಲೈಂಗಿಕ ಕಿರುಕುಳದ ಸೂಕ್ಷ್ಮ ವಿಷಯದ ಬಗ್ಗೆ ಎಣೆದಿರುವ ಕಥಾವಸ್ತುವುಳ್ಳ ನಾಟಕ ತೃತೀಯ ಬಹುಮಾನ ಪಡೆದವು.


ಕನಕಪುರ ಕೋಡಿಹಳ್ಳಿಯ ಪ್ರಥಮದರ್ಜೆ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಶಿಲ್ಪ ಬೆನಗೆರೆಯರವ ನೇತೃತ್ವದಲ್ಲಿ ವಿದ್ಯಾರ್ಥಿನಿಯರಿಂದ ಪ್ರದರ್ಶಿತವಾದ #ಮಾಧವಿ ನಾಟಕವು ಸಮಾಧಾನಕರ ಬಹುಮಾನವನ್ನು ಪಡೆದವು.

ಈ ಸ್ಪರ್ಧೆಯ ತೀರ್ಪುಗಾರರಾಗಿ ರಂಗಭೂಮಿಯ ನುರಿತ ಕಲಾವಿದರಾದ ರಂಗಪಯಣ ಸಂಸ್ಥೆಯ ನಯನಸೂಡರವರು, ಹಿರಿಯ ರಂಗಭೂಮಿ ಕಲಾವಿಕೆ ಶ್ರೀ ದಾಕ್ಷಾಯಣಿ ಭಟ್ ರವರು, ವಸ್ತ್ರ ವಿನ್ಯಾಸಕಿ ರೂಪಾಗೌಡ ಮತ್ತು ಅವಳಹೆಜ್ಜೆಯ ಸೃಜನಾತ್ಮಕ ನಿರ್ದೇಶಕಿ ಲೇಖಾನಾಯ್ಡುರವರು ಭಾಗವಹಿಸಿದ್ದರು.


ಗೆದ್ದ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಫಿ ಜೊತೆಗೆ, ಭಾಗವಹಿಸಿದ ಎಲ್ಲಾ ಕಾಲೇಜುಗಳಿಗೂ ಅವಳಹೆಜ್ಜೆ ವತಿಯಿಂದ ಮಹಿಳಾ ಸಬಲೀಕರಣ ಮತ್ತು ಕೌಶಲ್ಯಾಭಿವೃದ್ಧಿ ಸಂಬಂಧಿಸಿದ ಒಂದು ದಿನದ ಉಚಿತ ಕಾರ್ಯಾಗಾರದ ಆಶ್ವಾಸನಾ ಪತ್ರವನ್ನು ಕೊಡಲಾಯಿತು.


ಕಿರುನಾಟಕ ಸ್ಪರ್ಧೆಯ ನಂತರ ಸಂಸ್ಥೆಯ ಸ್ಥಾಪಕರಾದ ಶಾಂತಲಾದಾಮ್ಲೆಯವರು ಸ್ತ್ರೀನೋಟ ವಿಷಯಾಧಾರಿತ ಸಂವಾದ ನಡೆಸಿಕೊಟ್ಟರು. ನಟಿ ಶರಣ್ಯ, ಮಾನಸಿಕ ತಜ್ಞೆ ಪದ್ಮಾಕ್ಷಿ ಲೋಕೇಶ್, ನಯನ ಸೂಡ ಮತ್ತು ದಾಕ್ಷಾಯಣಿ ಭಟ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕನ್ನಡತಿ ಉತ್ಸವಕ್ಕೆ ಪೂರಕವಾಗಿ ನವೆಂಬರ್ 1 ನೇ ತಾರೀಕಿನಂದು ಕನ್ನಡ ರಾಜ್ಯೋತ್ಸವದ ನಿಮಿತ್ತ ಮಹಿಳೆಯರಿಂದ ಧ್ವಜಾರೋಹಣದ ಛಾಯಾಚಿತ್ರ ಸಂಗ್ರಹದ ವಿಶೇಷ ಅಭಿಯಾನಕ್ಕೆ ಕರೆ ನೀಡಲಾಗಿತ್ತು. ಮಾನಸಿಕ ಸಲಹೆಗಾರರಾದ ಆಶಾ ವಿಶ್ವನಾಥ್, ಅಬಕಾರಿ ಇನ್ಸ್ ಪೆಕ್ಟರ್ ಸುಮಾ ರಾಮಚಂದ್ರ, ದೇವಿಕಾ ಭೂಷಣ್ ಮತ್ತಿತರರೂ ಸೇರಿದಂತೆ ಧ್ವಜಾರೋಹಣ ಮಾಡಿದ ಛಾಯಾಚಿತ್ರಗಳನ್ನು ಕನ್ನಡತಿ ಉತ್ಸವದಂದು ಪ್ರದರ್ಶನಕ್ಕೆ ಇಡಲಾಗಿತ್ತು.ಸಂಗ್ರಹವಾದ ಛಾಯಾಚಿತ್ರಗಳನ್ನು ಕನ್ನಡತಿ ಉತ್ಸವದಂದು ಪ್ರದರ್ಶನಕ್ಕೆ ಇಡಲಾಗಿತ್ತು.


ಕನ್ನಡತಿ ಉತ್ಸವ ಆಚರಣೆಯ ವಿವರವಾದ ವರದಿ ಪ್ರಜಾವಾಣಿ, ವಿಜಯ ಕರ್ನಾಟಕ ಮತ್ತು ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.


2018ರ ಕನ್ನಡತಿ ಉತ್ಸವದ ಅಂಗವಾಗಿ ನನ್ನದೊಂದು ಕಥೆ ಎಂಬ ಶೀರ್ಷಿಕೆಯಡಿಯಲ್ಲಿ ಕಿರುಚಿತ್ರೋತ್ಸವ ನಡೆಸಲಾಗಿತ್ತು. ಮಹಿಳೆಯರು ತಮ್ಮ ಕಥೆಗಳನ್ನು ಧೈರ್ಯವಾಗಿ ಹೇಳಲು ಶುರುಮಾಡಿದಾಗ ಮಾತ್ರ ಸಮಾಜದ ಪೂರ್ಣ ಚಿತ್ರಣ ಸಿಗುವುದು ಮತ್ತು ನಿಜವಾದ ಸಮಾನತೆಯತ್ತ ಹೆಜ್ಜೆಯಾಗುವುದು ಎಂಬ ಭರವಸೆಯೊಂದಿಗೆ ಮಹಿಳೆಯರೇ ತಯಾರಿಸಿದ ಕಿರುಚಿತ್ರಗಳ ಪ್ರದರ್ಶನಕ್ಕೆ ಆಹ್ವಾನ ನೀಡಲಾಗಿತ್ತು.


ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಐದು ಕಡೆ ಜರುಗಿದ ಕನ್ನಡತಿ ಉತ್ಸವದಲ್ಲಿ ಸುಮಾರು 500 ಕ್ಕಿಂತ ಹೆಚ್ಚು ಜನರು, ಮುಖ್ಯವಾಗಿ ಮಹಿಳೆಯರು, ಭಾಗವಹಿಸಿದ್ದರು. ಪ್ರತೀ ಸ್ಥಳದಲ್ಲಿಯೂ ಮಹಿಳೆಯರು ತಯಾರಿಸಿದ ಕಿರುಚಿತ್ರಗಳ ಪ್ರದರ್ಶನದೊಂದಿಗೆ ಸ್ತ್ರೀ ನೋಟದ ಪ್ರಸ್ತುತಿಯ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.


2018 ರ ಕನ್ನಡತಿ ಉತ್ಸವದಲ್ಲಿ ಪ್ರದರ್ಶಿಸಲಾದ ಕಿರುಚಿತ್ರಗಳು:

  • ದರೋಜಿ – ರಚನೆ ಹಾಗು ನಿರ್ದೇಶನ, ಸುಗಂಧಿ ಗದಾಧರ

  • ಅಪ್ರಾಪ್ತ – ರಚನೆ ಹಾಗು ನಿರ್ದೇಶನ, ಕ್ಷೇಮಾ ಬಿ ಕೆ

  • ಜೀವನ ರೇಖೆ – ರಚನೆ ಹಾಗು ನಿರ್ದೇಶನ, ಸವಿತಾ ಇನಾಂದಾರ್

  • ಕಾಜಿ – ರಚನೆ ಹಾಗು ನಿರ್ದೇಶನ, ಐಶನಿ ಶೆಟ್ಟಿ

  • ದಾಳಿ – ನಿರ್ದೇಶನ, ಮೇದಿನಿ ಕೆಳಮನೆ

  • ಅನಲ, ನಿರ್ದೇಶನ, ಸಂಜ್ಯೋತಿ ವಿ ಕೆ

  • ಬೆಳ್ಳಿ ತಂಬಿಗೆ – ನಿರ್ಮಾಪಕ ತಂಡ: ಮಹಿಮಾ ಗೌಡ, ಅನುಶ್ರೀ ಭರದ್ವಾಜ, ಹರಿಪ್ರಿಯಾ ಕೆ ರಾವ್, ಶ್ರದ್ಧಾ ಸುಮನ್


2018 ರ ಎರಡನೇ ವರ್ಷದ “ಕನ್ನಡತಿ ಉತ್ಸವ” ವನ್ನು ದಿನಾಂಕ 3 ನವೆಂಬರ್ ರಂದು ಬೆಂಗಳೂರಿನ ಗಾಂದಿಭವನದಲ್ಲಿ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಖ್ಯಾತ ಚಿತ್ರನಿರ್ಮಾಪಕಿ ಕವಿತಾ ಲಂಕೇಶ್ ಉತ್ಸವವನ್ನು ಉದ್ಘಾಟಿಸಿ, ಸಭಿಕರನ್ನು ಉದ್ದೇಶಿಸಿ ಮಾತನಾಡಿ ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.


ಕಾರ್ಯಕ್ರಮದ ಅಂಗವಾಗಿ ಕನ್ನಡತಿಯರ ಪಾತ್ರವನ್ನು ಸ್ಮರಿಸಲು ಮಹಿಳೆಯರೇ ತಯಾರಿಸಿದ ಹಲವು ಕಿರುಚಿತ್ರಗಳ ಪ್ರದರ್ಶನದ ಜೊತೆಗೆ ಪ್ರಾದೇಶಿಕ ಮಾಧ್ಯಮಗಳಲ್ಲಿ ‘ಸ್ತ್ರೀ ನೋಟ’ದ ಪ್ರಸ್ತುತಿ, ಪ್ರಾಮುಖ್ಯತೆ ಮತ್ತು ಸವಾಲುಗಳ ಕುರಿತು ಎರಡು ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಉತ್ಸವಕ್ಕೆ ಮೆರುಗು ತಂದುಕೊಟ್ಟಿತು.


ಅವಳ ಹೆಜ್ಜೆಯ ಸ್ಥಾಪಕಿ ಶಾಂತಲಾ ದಾಮ್ಲೆ ಅತಿಥಿಗಳನ್ನು ಸ್ವಾಗತಿಸುತ್ತಾ “ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ, ‘ಆಟದ ಮೈದಾನದಿಂದ ಬೋರ್ಡ್ ರೂಂ’ವರೆಗೂ, ಹೆಣ್ಣುಮಕ್ಕಳ ಪಾತ್ರ, ಕೊಡುಗೆಗಳ ಹೆಜ್ಜೆಗುರುತು ಇರಬೇಕೆಂಬುದು ‘ಅವಳ ಹೆಜ್ಜೆ’ಯ ಆಶಯ ಮತ್ತು ಧ್ಯೇಯ. ಅದಕ್ಕಾಗಿಯೇ, ತಮ್ಮ ವೃತ್ತಿಜೀವನದಲ್ಲಿ ಎದುರಿಸುವ ಅಡೆತಡೆ, ಅಗೋಚರ ಪಕ್ಷಪಾತಗಳನ್ನು ಮೆಟ್ಟುವ ಜಾಣ್ಮೆ ಮತ್ತು ಯಶಸ್ಸಿನ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಸಾಗಲು ಅಳವಡಿಸಿಕೊಳ್ಳಬೇಕಾದ ಕ್ರಿಯಾತ್ಮಕತೆಗಳ ತರಬೇತಿಯನ್ನು ಕಾಲೇಜು ವಿದ್ಯಾರ್ಥಿನಿಯರಿಗೆ ‘ಅವಳ ಹೆಜ್ಜೆ’ ನೀಡುತ್ತದೆ.” ಎಂದರು.


ಪ್ರಥಮ ಸಂವಾದವನ್ನು ಲೇಖಕಿ ಹಾಗು ರೇಡಿಯೋ ಜಾಕಿಯಾಗಿರುವ ಶೃತಿ ಶಾರದಾ ನಡೆಸಿಕೊಟ್ಟರು ಮತ್ತು ಕವಿತಾ ಲಂಕೇಶ್ ಅವರೊಂದಿಗೆ ಚಲನಚಿತ್ರ, ಟಿವಿ ಹಾಗು ರಂಗಕರ್ಮಿಯಾಗಿರುವ ಮಲ್ಲಿಕಾ ಪ್ರಸಾದ್ ಮತ್ತು ಲೇಖಕ ಜೋಗಿ ಚರ್ಚೆಯಲ್ಲಿ ಭಾಗವಹಿಸಿದ್ದರು.


ಅವಳ ಹೆಜ್ಜೆಯ ಸೃಜನಾತ್ಮಕ ನಿರ್ದೇಶಕಿ ಲೇಖಾ ನಾಯ್ಡುರವರು ‘ಸ್ತ್ರೀ ನೋಟ’ದ ಪ್ರಸ್ತುತಿ ಮತ್ತು ಚರ್ಚಿಸಬೇಕಾದ ಅಗತ್ಯವನ್ನು ವಿವರಿಸುತ್ತಾ, “ಮಾಧ್ಯಮಗಳು ಹೆಚ್ಚಾಗಿ ಪುರುಷರ ಹತೋಟಿಯಲ್ಲಿರುವುದರಿಂದ ಪಿತೃಪ್ರಭುತ್ವದ ಕಲ್ಪನೆಯ ಚಿತ್ರಣವಷ್ಟೇ ಸಮಾಜಕ್ಕೆ ಸಿಗುತ್ತಿದೆ. ಹೀಗಾಗಿ ‘ಪುರುಷ ನೋಟ’ ಅಂದರೆ ಪುರುಷ ಪಾತ್ರಗಳು ಮತ್ತು ಪುರುಷ ವೀಕ್ಷಕರ ಅಭಿರುಚಿ, ದೃಷ್ಟಿಕೋನಕ್ಕೆ ಪೂರಕವಾಗಿ ಮಾತ್ರವೇ ಚಲನಚಿತ್ರ ಮಾಧ್ಯಮ ರೂಪಿತಗೊಂಡಿದೆ. ಇದಕ್ಕೆ ತದ್ವಿರುದ್ಧವಾಗಿ, ಸ್ತ್ರೀ ವೀಕ್ಷಕರ ನೋಟ ಮತ್ತು ಮಹಿಳೆಯರ ನಿರ್ಮಾಣ, ನಿರ್ದೇಶನದಲ್ಲಿ ಭಿನ್ನವಾದ ಚಿತ್ರಣ ಹೆಚ್ಚು ಹೊರಬರಲು ಸಾಧ್ಯವಿದೆ. ಹೆಚ್ಚು ಹೆಚ್ಚು ಮಹಿಳೆಯರು ಜನಪ್ರಿಯ ಸಿನಿಮಾ ಮತ್ತು ಮಾಧ್ಯಮಗಳಲ್ಲಿ ತೊಡಗಿಸಿಕೊಂಡಷ್ಟೂ, ಸ್ತ್ರೀಯರ ದೃಷ್ಟಿಕೋನ ಸಹಾ ನಮ್ಮ ಸಮಾಜ, ಸಂಸ್ಕೃತಿಯ ಭಾಗವಾಗುತ್ತದೆ. ಸಮಾಜದ ಉನ್ನತಿಗೆ ಪೂರಕವಾಗುತ್ತದೆ” ಎಂದರು.


ಕಾರ್ಯಕ್ರಮದ ಎರಡನೇ ಸಂವಾದವನ್ನು ಲೇಖಾ ನಾಯ್ಡು ನಡೆಸಿಕೊಟ್ಟರು. ‘ಪರಿಕ್ರಮಣೆ: ಕಥೆಯಿಂದ ಪರದೆಯವರೆಗೆ’ ಎಂಬ ವಿಷಯದ ಮೇಲೆ ಚಲನಚಿತ್ರ ನಿರ್ಮಾಪಕಿಯರಾದ ಅನನ್ಯಾ ಕಾಸರವಳ್ಳಿ, ರೂಪಾ ರಾವ್, ಸಂಜ್ಯೋತಿ ವಿ ಕೆ ಮತ್ತು ಪದ್ಮಲತ ರವಿ ಭಾಗವಹಿಸಿ, ಚಿತ್ರ ನಿರ್ಮಾಣದ ಸಾಹಸೋದ್ಯಮದಲ್ಲಿ ತಾಂತ್ರಿಕತೆ, ತಂಡ ರಚನೆ ಇತ್ಯಾದಿ ಹಂತಗಳಲ್ಲಿ ಮಹಿಳೆಯರು ಎದುರಿಸಬೇಕಾದ ವಿಶಿಷ್ಟ ಸವಾಲುಗಳ ಬಗ್ಗೆ ಚರ್ಚೆ ಮಾಡಲಾಯಿತು.


ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ


ಮೈಸೂರಿನ ಇನ್ಫೋಸಿಸ್ ಸಂಸ್ಥೆಯು ತನ್ನ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡತಿ ಉತ್ಸವವನ್ನು ಆಚರಿಸಲು ಅವಳಹೆಜ್ಜೆ ತಂಡವನ್ನು ಆಮಂತ್ರಿಸಿತು. ಕಿರುಚಿತ್ರಗಳ ಪ್ರದರ್ಶನದ ಜೊತೆ ‘ಸ್ತ್ರೀ ನೋಟ’ದ ಪ್ರಸ್ತುತಿ, ಪ್ರಾಮುಖ್ಯತೆ ಮತ್ತು ಸವಾಲುಗಳ ಕುರಿತು ಚರ್ಚೆಯನ್ನು ಏರ್ಪಡಿಸಲಾಗಿತ್ತು. ಪತ್ರಕರ್ತೆ ಮತ್ತು ರಂಗಕರ್ಮಿಯಾದ ಮೈಸೂರಿನ ಪ್ರೀತಿ ನಾಗರಾಜ್ ನಡೆಸಿಕೊಟ್ಟ ಚರ್ಚೆಯಲ್ಲಿ ಇನ್ಫೋಸಿಸ್ ನ ಅರುಣ ನ್ಯೂಟನ್ ಮತ್ತು ಅನಿತಾ ಶ್ರೀನಿವಾಸಯ್ಯ ಅವರೊಂದಿಗೆ ಶಿಲ್ಪಿ ಮತ್ತು ಚಿತ್ರ ನಿರ್ದೇಶಕಿಯಾದ ಮೈಸೂರಿನ ಡಾ. ಬಿ.ಆರ್. ಗೀತಾಂಜಲಿ ಭಾಗವಹಿಸಿದ್ದರು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ


ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಸಹಯೋಗದಲ್ಲಿ ಡಿಸೆಂಬರ್ 1 ರಂದು ಜರುಗಿದ ಕನ್ನಡತಿ ಉತ್ಸವದಲ್ಲಿ ಕಿರುಚಿತ್ರ ಪ್ರದರ್ಶನದ ಜೊತೆ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಮೇಟಿ ಮಲ್ಲಿಕಾರ್ಜುನ ಮತ್ತು ಡಾ. ಸಬಿತ ಬನ್ನಾಡಿ ಭಾಗವಹಿಸಿದ್ದರು. ಬೆಂಗಳೂರಿನ ರಂಗಭೂಮಿ ಕಲಾವಿದೆ ರಶ್ಮಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮುಖ್ಯ ಭಾಷಣ ಮಾಡಿದರು.


ವಿಜಯಪುರದ ಅಕ್ಕ ಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ


ವಿಜಯಪುರದ ಅಕ್ಕ ಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಡಿಸೆಂಬರ್ 4 ರಂದು ಜರುಗಿದ ಕನ್ನಡತಿ ಉತ್ಸವವನ್ನು ಉಪಕುಲಪತಿಗಳಾದ ಪ್ರೊ.ಸಬೀಹ ಭೂಮಿಗೌಡ ಉದ್ಘಾಟಿಸಿದರು.


ಸಂವಾದ ಕಾರ್ಯಕ್ರಮದಲ್ಲಿ ಪತ್ರಿಕಾ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಓಂಕಾರ್ ಕಾಕಡೆ, ಸಾಮಾಜಿಕ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್. ಎ. ಖಾಜಿ, ಅಹಲ್ಯಭಾಯಿ ಮಹಿಳಾ ಉನ್ನತ ಶಿಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ಪ್ರೊ.ಸುನಂದಮ್ಮ, ದು.ಸರಸ್ವತಿ ಭಾಗವಹಿಸಿದ್ದರು. ಸಿನಿಮಾ ನಿರ್ಮಾಪಕಿ ಹಾಗೂ ಕಲ್ಬುರ್ಗಿಯ ಉದ್ಯಮಿ ಶ್ರುತಿ ಕುಲಕರ್ಣಿ ಸಭೆಯನ್ನು ಕುರಿತು ಮುಖ್ಯ ಭಾಷಣ ಮಾಡಿದರು.


ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ


2018 ರ ಕಡೆಯ ಕನ್ನಡತಿ ಉತ್ಸವವನ್ನು ಡಿಸೆಂಬರ್ 4 ರಂದು ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ ನಡೆಸಲಾಯಿತು. ಕಿರುಚಿತ್ರ ಪ್ರದರ್ಶನದ ನಂತರದ ಸಂವಾದ ಕಾರ್ಯಕ್ರಮದಲ್ಲಿ ಡಾ. ಸುದೇಶ್ನ ಮುಖರ್ಜಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಕನ್ನಡತಿ ಉತ್ಸವ ಆಚರಣೆಯ ವಿವರವಾದ ವರದಿ ಪ್ರಜಾವಾಣಿ, ಕನ್ನಡಪ್ರಭ, ವಿಶ್ವವಾಣಿ ಮತ್ತು ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.


bottom of page