top of page

ಪತ್ರಿಕಾ ಪ್ರಕಟಣೆ

  • Writer: Avala Hejje
    Avala Hejje
  • Mar 2
  • 2 min read

Updated: Apr 2

ಅವಳ ಹೆಜ್ಜೆ ಕಿರುಚಿತ್ರೋತ್ಸವ 2025

ಸ್ಪರ್ಧೆಗೆ ಮಹಿಳಾ ನಿರ್ಮಾಪಕ, ನಿರ್ದೇಶಕರಿಂದ ಅರ್ಜಿ ಆಹ್ವಾನ

ಜೂನ್ ತಿಂಗಳಿನಲ್ಲಿ ನಡೆಯಲಿರುವ “ಅವಳ ಹೆಜ್ಜೆ ಮಹಿಳಾ ಕಿರುಚಿತ್ರೋತ್ಸವ-2025” ಕ್ಕೆ ಸಂಬಂಧಿಸಿ ಕಿರುಚಿತ್ರ ಸ್ಪರ್ಧೆ ಮತ್ತು ಚಿತ್ರಕಥೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಗೆ ಬಲವಾದ ಪಾತ್ರಗಳ ತೀವ್ರ ಕೊರತೆಯಿದೆ ಎಂಬುದು ಸ್ಪಷ್ಟ. ಮಹಿಳೆಯರೇ ಚಿತ್ರ ನಿರ್ಮಾಣ, ಚಿತ್ರ ನಿರ್ದೇಶನ ಹೆಚ್ಚಾಗಿ ಮಾಡಿದಲ್ಲಿ ಮಹಿಳಾ ಮುಖ್ಯಪಾತ್ರಗಳಿಗೆ, ಮಹಿಳೆಯರ ಅನುಭವ ಮತ್ತು ದೃಷ್ಟಿಕೋನಗಳಿಗೆ ವೇದಿಕೆ ಸೃಷ್ಟಿಸಲು ಸಾಧ್ಯವಾಗುತ್ತದೆ ಎಂಬುದು ಅವಳ ಹೆಜ್ಜೆಯ ನಿಲುವು. ಮಹತ್ವಾಕಾಂಕ್ಷಿ ಚಿತ್ರ ನಿರ್ಮಾಪಕಿ/ನಿರ್ದೇಶಕಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ಅತ್ಯಾಕರ್ಷಕ ನಗದು ಬಹುಮಾನಗಳನ್ನು ಗೆಲ್ಲಲು ಮತ್ತು ಲಿಂಗ ಸಮಾನತೆಯ ನಿಟ್ಟಿನಲ್ಲಿ ಕೊಡುಗೆ ನೀಡಲು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಅವಳ ಹೆಜ್ಜೆಯ ಸ್ಥಾಪಕಿ ಶಾಂತಲಾ ದಾಮ್ಲೆ ಯವರ ಆಶಯ.

ಕಿರುಚಿತ್ರ ಸ್ಪರ್ಧೆ

ಪ್ರದರ್ಶನದ ಪರಿಗಣನೆಗಾಗಿ ತಮ್ಮ ಕಿರುಚಿತ್ರವನ್ನು ಸಲ್ಲಿಸಲು ರಾಜ್ಯದ ಮಹಿಳಾ ನಿರ್ಮಾಪಕ, ನಿರ್ದೇಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್ 31, 2025 ರೊಳಗೆ ​ಕಿರುಚಿತ್ರ ಸಲ್ಲಿಸಿದಲ್ಲಿ ಪ್ರವೇಶ ಶುಲ್ಕದಿಂದ ರಿಯಾಯಿತಿ ನೀಡಲಾಗುವುದು. ಅರ್ಜಿಯನ್ನು www.avalahejje.net ಮೂಲಕ ಸಲ್ಲಿಸಬೇಕು. 

ಅತ್ಯುತ್ತಮ ಕಿರುಚಿತ್ರಕ್ಕೆ "ಅವಳ ಹೆಜ್ಜೆ ಬಹುಮಾನ" ನಗದು ₹1,00,000 (ಒಂದು ಲಕ್ಷ) ಪಡೆಯುವ ಅವಕಾಶವಿದೆ. ಜೊತೆಗೆ, ಈ ಕೆಳಗಿನ ವಿಶೇಷ ವರ್ಗಗಳಲ್ಲಿ ತಲಾ ಒಂದು ಚಿತ್ರಕ್ಕೆ ಮೆಚ್ಚುಗೆಯ ಬಹುಮಾನ ನಗದು ₹10,000 (ಹತ್ತು ಸಾವಿರ) ಪಡೆಯುವ ಅವಕಾಶವಿದೆ. 

  • ಅತ್ಯುತ್ತಮ ಜೀವನಚರಿತ್ರೆಯ ಚಿತ್ರ

  • ಅತ್ಯುತ್ತಮ ಅನಿಮೇಶನ್ ಚಿತ್ರ

  • ಅತ್ಯುತ್ತಮ ಮಕ್ಕಳ ಚಲನಚಿತ್ರ

  • ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ

  • ಅತ್ಯುತ್ತಮ ವಿದ್ಯಾರ್ಥಿನಿಯ ಚಿತ್ರ

  • ಅತ್ಯುತ್ತಮ ಕ್ರೀಡಾ ವಿಷಯದ ಚಿತ್ರ

  • ಅತ್ಯುತ್ತಮ ಸಂರಕ್ಷಣಾ ವಿಷಯದ ಚಿತ್ರ 

  • ರಾಜಕೀಯ/ಪ್ರಜಾಪ್ರಭುತ್ವ ವಿಷಯದ ಅತ್ಯುತ್ತಮ ಚಲನಚಿತ್ರ​​

ಕೊನೆಯ ದಿನ ಹಾಗೂ  ಪ್ರವೇಶ ಶುಲ್ಕ:


  • ​ಅರ್ಜಿಯನ್ನು www.avalahejje.net ಮೂಲಕ ಸಲ್ಲಿಸಬೇಕು.

  • ಕಿರುಚಿತ್ರ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, 2025.  ಪ್ರವೇಶ ಶುಲ್ಕ  ₹1000.

  • ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್ 31, 2025 ರೊಳಗೆ ​ಕಿರುಚಿತ್ರ ಸಲ್ಲಿಸಿದಲ್ಲಿ ಪ್ರವೇಶ ಶುಲ್ಕ ₹0

ಚಿತ್ರಕಥಾ ಸ್ಪರ್ಧೆ 


ಚಿತ್ರ ನಿರ್ಮಾಣ ಮಾಡಲಿಚ್ಚಿಸುವ ಉದಯೋನ್ಮುಖ ಮಹಿಳಾ ನಿರ್ದೇಶಕರಿಗಾಗಿ ಚಿತ್ರಕಥಾ ಸ್ಪರ್ಧೆಯನ್ನು ಸಹಾ ಏರ್ಪಡಿಸಲಾಗಿದೆ. ಆಯ್ಕೆಯಾದ ಅತ್ಯುತ್ತಮ ಚಿತ್ರಕಥೆಗೆ ನಿರ್ಮಾಣದಲ್ಲಿ ನುರಿತರಿಂದ ಮಾರ್ಗದರ್ಶನದ ಜೊತೆಗೆ ಗರಿಷ್ಟ ₹1,00,000 (ಒಂದು ಲಕ್ಷ) "ಚಿತ್ರ ನಿರ್ಮಾಣ ಅನುದಾನ" ವನ್ನು ನಿರ್ಮಾಣದ ಅನೇಕ ಹಂತದಲ್ಲಿ ಕಂತಿನ ಮೂಲಕ ನೀಡಲಾಗುವುದು.  ಆಯ್ಕೆಯನ್ನು ಜೂನ್ ತಿಂಗಳಿನಲ್ಲಿ ನಡೆಯಲಿರುವ ಕಿರುಚಿತ್ರೋತ್ಸವ ಸಮಾರಂಭದಲ್ಲಿ ಪ್ರಕಟಿಸಲಾಗುವುದು. ಆಸಕ್ತ ಮಹಿಳೆಯರು ಚಿತ್ರಕಥೆಯನ್ನು ಪ್ರತ್ಯೇಕ ಅರ್ಜಿ ಸಲ್ಲಿಸುವ ಮೂಲಕ "ಚಿತ್ರ ನಿರ್ಮಾಣ ಅನುದಾನ" ಕ್ಕೆ ಸ್ಪರ್ಧಿಸಬಹುದು. 

  • ಚಿತ್ರ ನಿರ್ಮಾಣ ಅನುದಾನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, 2025. ಪ್ರವೇಶ ಶುಲ್ಕ ₹1000. ಅರ್ಜಿಯನ್ನು www.avalahejje.net ಮೂಲಕ ಸಲ್ಲಿಸಬೇಕು.

“ಅವಳ ಹೆಜ್ಜೆ” ಬಗ್ಗೆ 

“ಅವಳ ಹೆಜ್ಜೆ” – ಹೆಣ್ಣಿನ ಹೆಜ್ಜೆಗುರುತು ಆಟದ ಮೈದಾನದಿಂದ ಬೋರ್ಡ್ ರೂಂವರೆಗೂ ಎಲ್ಲೆಡೆ ಕಾಣುವ ಆಶಯದೊಂದಿಗೆ ಶಾಂತಲಾ ದಾಮ್ಲೆ ಯವರು ಆರಂಭಿಸಿದ ಸಾಮಾಜಿಕ ಸಂಕಲ್ಪ. ಕಳೆದ ಎಂಟು ವರ್ಷಗಳಲ್ಲಿ ಅವಳ ಹೆಜ್ಜೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. 2018ರಲ್ಲಿ ಆಯೋಜಿಸಿದ್ದ  ಮಹಿಳೆಯರೇ ತಯಾರಿಸಿದ ಕಿರುಚಿತ್ರಗಳ ಪ್ರದರ್ಶನವೂ ಇದರಲ್ಲಿ ಪ್ರಮುಖವಾಗಿದೆ. ಈ ವರ್ಷ 'ಅವಳ ಹೆಜ್ಜೆ' ಕಿರು ಚಲನಚಿತ್ರೋತ್ಸವ ಮತ್ತು ಸ್ಪರ್ಧೆಯನ್ನು ಏರ್ಪಡಿಸುವುದರ ಮೂಲಕ ಒಂದು ಪ್ರಮುಖ ಹೆಜ್ಜೆಯನ್ನು ಇಡುತ್ತಿದೆ.  

ಸಿನಿಮಾದಲ್ಲಿ ಮಹಿಳೆಯರ ಧ್ವನಿಯನ್ನು ಹೆಚ್ಚಿಸಲು ಮತ್ತು ಸಮಾನತೆಯತ್ತ ದಿಟ್ಟ ಹೆಜ್ಜೆಗಳನ್ನು ಇಡಲು ಈ ಚಿತ್ರೋತ್ಸವದಲ್ಲಿ ಭಾಗವಹಿಸಿ!  ಇದು ಕೇವಲ ಕಿರುಚಿತ್ರ ಸ್ಪರ್ಧೆಯಲ್ಲ. ಕನ್ನಡ ಚಿತ್ರರಂಗದಲ್ಲಿ ಮಹಿಳಾ ಮುಖ್ಯಪಾತ್ರಗಳಿಗೆ, ಮಹಿಳೆಯರ ಅನುಭವ ಮತ್ತು ದೃಷ್ಟಿಕೋನಗಳಿಗೆ ವೇದಿಕೆ ಸೃಷ್ಟಿಸುವುದರ ಮೂಲಕ, ಮಹಿಳೆಯರ ಬಗ್ಗೆ, ಲಿಂಗ ಸಮಾನತೆಯ ಬಗ್ಗೆ ಸಮಾಜದ ಧೋರಣೆಗಳನ್ನು ರೂಪಿಸುವಲ್ಲಿ ನುರಿತರಿಗೂ, ಉದಯೋನ್ಮುಖರಿಗೂ ನಮ್ಮೊಂದಿಗೆ ಹೆಜ್ಜೆ ಹಾಕಲು ಆಹ್ವಾನ. “ಅವಳ ಹೆಜ್ಜೆ ಮಹಿಳಾ ಕಿರುಚಿತ್ರೋತ್ಸವ”ವನ್ನು 2025 ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುವುದು. 

ಹೆಚ್ಚಿನ ವಿವರಗಳು ಮತ್ತು ಸಲ್ಲಿಕೆ ಮಾರ್ಗಸೂಚಿಗಳಿಗಾಗಿ, www.avalahejje.net ಗೆ ಭೇಟಿ ನೀಡಿ.  ಪ್ರಶ್ನೆಗಳಿದ್ದಲ್ಲಿ, avalahejjefilms@gmail.com ಗೆ ಈಮೇಲ್ ಅಥವಾ 8867747236 ಗೆ ವಾಟ್ಸಾಪ್ ಮಾಡಿ.


 
 
bottom of page