ಕನ್ನಡತಿ ಉತ್ಸವ – 2017
- Avala Hejje
- Dec 13, 2017
- 2 min read
Updated: Feb 28
2017 ರ “ಕನ್ನಡತಿ ಉತ್ಸವ” ವನ್ನು “ಕನ್ನಡತಿಯ ಹೆಜ್ಜೆ” ಎಂಬ ಶೀರ್ಷಿಕೆಯಡಿಯಲ್ಲಿ ನಡೆಸಲಾಗಿತ್ತು. ಡಿಸೆಂಬರ್ 8 ರಿಂದ 10, 3 ದಿನಗಳ ಕಾಲ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ “ರಂಗೋಲಿ – ಮೆಟ್ರೊ ಆರ್ಟ್ ಸೆಂಟರ್” ನ “ವಿಸ್ಮಯ” ಗ್ಯಾಲರಿಯಲ್ಲಿ ನಡೆದ ಉತ್ಸವದಲ್ಲಿ 200 ಕ್ಕೂ ಹೆಚ್ಚು ಮಂದಿ, ಬಹುತೇಕ ಮಹಿಳೆಯರು, ಭಾಗವಹಿಸಿದ್ದರು. ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ 40ಕ್ಕೂ ಹೆಚ್ಚು ಕಲಾವಿದರು ತಮ್ಮ ಚಿತ್ರಕಲಾಕೃತಿ, ಕವಿತೆ, ಲೇಖನ, ಕಿರುಚಿತ್ರಗಳು, ಪ್ರದರ್ಶನ ಕಲೆಗಳ ಮೂಲಕ ಅನೇಕ ಸ್ತ್ರೀಕೇಂದ್ರಿತ ಕೃತಿಗಳನ್ನು ಪ್ರದರ್ಶಿಸಿದ್ದರು.
ಖ್ಯಾತ ಅಭಿನೇತ್ರಿ ಪದ್ಮಾವತಿ ರಾವ್ (“ಗೀತಾ” ಚಿತ್ರದಲ್ಲಿ ಅಕ್ಷತಾ ರಾವ್ ಎಂದು ಹೆಸರಾಗಿದ್ದ) ಕನ್ನಡತಿ ಉತ್ಸವವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಥ್ರೋ ಬಾಲ್ ತಂಡದ ಕ್ಯಾಪ್ಟನ್ ಕೃಪಾ ಪ್ರಸಾದ್ ಮತ್ತು ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ ವಿಶೇಷ ಅತಿಥಿಗಳಾಗಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಹೆಣ್ಣಿನ ಹೆಜ್ಜೆ ಎಲ್ಲೆಲ್ಲೂ ಮೂಡಿಬರಬೇಕೆಂಬ ಆಶಯದ ಸಂಕೇತವಾಗಿ ಹಸಿ ಜೇಡಿಮಣ್ಣು ತುಂಬಿದ ತಟ್ಟೆಯಲ್ಲಿ ಹೆಜ್ಜೆಯಿಟ್ಟು ತಮ್ಮ ಪಾದದ ಗುರುತನ್ನು ಮೂಡಿಸುವ ವಿನೂತನ ಮಾದರಿಯಲ್ಲಿ ಮೂಲಕ ಪದ್ಮಾವತಿ ರಾವ್ “ಕನ್ನಡತಿ ಉತ್ಸವ” ವನ್ನು ಉದ್ಘಾಟಿಸಿದರು. ಜೇಡಿಮಣ್ಣಿನ ಕೃತಿಯನ್ನು ಕೊಡುಗೆಯಾಗಿ ನೀಡಿದ ಶಿಲ್ಪಿ ಶಾರದಾ ಭಾರದ್ವಾಜ್.”ಹೆಣ್ಣು ಶಿಶುವಿನ ಕುರಿತ ಬರೆದ ಲಾಲಿ ಹಾಡುಗಳೇ ಚಾಲ್ತಿಯಲ್ಲಿಲ್ಲ” ಎಂದು ಆಶ್ಚರ್ಯ ವ್ಯಕ್ತಪಡಿಸಿ, ಹೆಸರಾಂತ ಲೇಖಕಿ ಶ್ರೀಮತಿ ವಸುಮತಿ ಉಡುಪ ಅವರು ಕನ್ನಡತಿ ಉತ್ಸವಕ್ಕೆಂದೇ ವಿಶೇಷವಾಗಿ ಸೂಕ್ತ ಕವಿತೆಯೊಂದನ್ನು ರಚಿಸಿ ನೀಡಿದ್ದರು. ವನಿತಾ ಅಶೋಕ್, ಡಾ.ಚರಿತಾ ಮೈಸೂರು, ಸಲೀಂ ಹಮೀದ್ ಇನ್ನಿತರರು ತಮ್ಮ ವರ್ಣಚಿತ್ರಗಳನ್ನು ಪ್ರದರ್ಶನಕ್ಕೆಂದು ನೀಡಿದ್ದಾರೆ. ಡಿ.ಯಶೋದಾ, ಅಂಜಲಿ ರಾಮಣ್ಣ, ಕೊಡಗಿನ ಮಮತಾ ದೇವ, ಮಮತಾ ಅರಸಿಕೆರೆ ಮತ್ತು ದೀಪದ ಮಲ್ಲಿ ತಮ್ಮ ಪುಸ್ತಕ, ಕವಿತೆ ಅಥವಾ ಲೇಖನಗಳನ್ನು ನೀಡಿದ್ದರು.
ವಿಮೋಚನಾ ಎಂಬ ಮಹಿಳಾ ಕೇಂದ್ರಿತ ಸಂಸ್ಥೆ “ಸಾಂಗ್ ಆಫ್ ದಿ ಸೈಕಿ” ಎಂಬ ಕಿರುಚಿತ್ರವನ್ನು ಪ್ರದರ್ಶಿಸಲು ನೀಡಿದ್ದರೆ, AIMSS ಎಂಬ ಇನ್ನೊಂದು ಮಹಿಳಾ ಕೇಂದ್ರಿತ ಸಂಸ್ಥೆ ಪುಸ್ತಕ ಮಳಿಗೆಯನ್ನು ತೆರೆದಿತ್ತು. “ಫಂಕಿ ರೇನ್ಬೋ – ಟ್ರಾವೆಲಿಂಗ್ ಚಿಲ್ದ್ರೆನ್ಸ್ ಬುಕ್ ಶಾಪ್” ರ ಭಾರತೀಯ ಮಕ್ಕಳ ಕಥೆಗಳ ಪುಸ್ತಕ ಮಳಿಗೆ ಮತ್ತು ಬಾಲೆಯರು ಪ್ರಮುಖ ಪಾತ್ರ ವಹಿಸಿದ ಕಥೆಗಳ ಕುರಿತಾಗಿ ವಿದ್ಯಾ ಮಣಿಯವರು “ಗರ್ಲ್ಸ್ ಟು ದಿ ರೆಸ್ಕ್ಯೂ” ಎಂಬ ಸಂವಾದವನ್ನು ನಡೆಸಿಕೊಟ್ಟರು.ಸ್ನೇಹಲತಾ ರೆಡ್ಡಿಯವರ “ಪ್ರಿಸನ್ ಡೈರಿ”ಯ, ಟಿ ಆರ್ ಮೋಹನ್ ಅವರ ಕನ್ನಡ ಅನುವಾದದ ಅಪರೂಪದ ಪ್ರತಿಯೊಂದನ್ನು ಕೊನಾರಕ್ ರೆಡ್ಡಿ ಮತ್ತು ಕೀರ್ತನ ಕುಮಾರ್ ಉದಾರ ಮನಸ್ಸಿನಿಂದ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು. ಈ ಕೃತಿಯನ್ನು ಇಂಗ್ಲಿಷ್ ನಲ್ಲಿ ಮೊದಲು ಪ್ರಕಟಿಸಿದ್ದು ಯು ಆರ್ ಅನಂತಮೂರ್ತಿಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕು ಸಮಿತಿ.
“ಪ್ರಿಸನ್ ಡೈರಿ” ಸ್ನೇಹಲತಾ ರೆಡ್ಡಿಯವರು ತುರ್ತು ಪರಿಸ್ಥಿತಿ ಸಮಯದಲ್ಲಿ ಅಕ್ರಮ ಬಂಧನಕ್ಕೊಳಗಾದಾಗ ಬರೆದಿಟ್ಟುಕೊಂಡಿದ್ದ ವೈಯುಕ್ತಿಕ ದಾಖಲೆ. ಬೆಂಗಳೂರಿನ ಆಗಿನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹೋರಾಟಗಾರರ ವಲಯದಲ್ಲಿ ಸ್ನೇಹಲತಾ ರೆಡ್ಡಿ ಪ್ರಮುಖ ಹೆಸರಾಗಿದ್ದರು. ಅವರ ವೈಯುಕ್ತಿಕ ದಾಖಲೆ ಆಗಿನ ವ್ಯವಸ್ಥೆ, ಅಕ್ರಮ ಬಂಧನಕ್ಕೊಳಗಾದವರ ಪರಿಸ್ಥಿತಿಯ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ.
ಬಳ್ಳಾರಿ ಜಿಲ್ಲೆಯ ಪುಟ್ಟ ಗ್ರಾಮದಿಂದ “ಕನ್ನಡತಿ ಉತ್ಸವ” ದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕುಡಿತಿನಿ ಅಕ್ಕನಾಗಮ್ಮ ಜನಪದ ಸಂಗೀತವನ್ನು ಹಾಡಿದರು. ಹೆಣ್ಣು ಶಿಶುವನ್ನು ಕುರಿತ ಲಾಲಿ ಹಾಡಿನಿಂದ ಶುರುಮಾಡಿ, ಆಕೆಯ ಜೀವನದ ವಿವಿಧ ಮೈಲಿಗಲ್ಲುಗಳನ್ನು ಆಚರಿಸುವ ಪದ್ಯಗಳನ್ನು ಎಲ್ಲರ ಮನಮುಟ್ಟುವಂತೆ ಹಾಡಿದ ಅಕ್ಕನಾಗಮ್ಮ, ಸಂದರ್ಭಕ್ಕೆ ತಕ್ಕ ಪದ್ಯಗಳನ್ನು ಸ್ಥಳದಲ್ಲೇ ರಚಿಸಿ ಹಾಡುವುದರಲ್ಲಿ ನಿಸ್ಸೀಮರು.ಶಾರದಾ ಜಿ.ಎಸ್. ಅವರ ಜಾದೂ ಪ್ರದರ್ಶನವಿತ್ತು. ಇನ್ನಿತರ ಪ್ರದರ್ಶನಗಳೆಂದರೆ ದೀಪದ ಮಲ್ಲಿಯವರಿಂದ ಕುವೆಂಪು ರಚಿಸಿದ “ರಕ್ತಾಕ್ಷಿ” ಯ ಒಂದು ಅಂಕದ ಏಕಾಭಿನಯ, “ದುರ್ಗಾ ವೆಜೆಟೇಬಲ್ಸ್” ಉದ್ಯಮಿ ಶ್ರೀಲಕ್ಷ್ಮಿ ಮತ್ತು ತಂಡದವರಿಂದ ಯೋಗ ಮತ್ತು ರಂಗಲಕ್ಷ್ಮಿಯವರಿಂದ ಹಾಸ್ಯ ಪ್ರದರ್ಶನ.
ಉತ್ಸವದಲ್ಲಿ ಎರಡು ಚರ್ಚಾಕೂಟವನ್ನು ಏರ್ಪಡಿಸಲಾಗಿತ್ತು. ಚಿನ್ಮಯಿ ಪ್ರವೀಣ್, ರಂಜನಿ ರಾಮನ್, ಸೀಮಾ ಪ್ರಭು ಭಾಗವಹಿಸಿದ್ದ ”ಉದ್ಯಮಿಗಳ ಜಗತ್ತು” ಎಂಬ ಚರ್ಚೆಯನ್ನು “ಸಾರಥಿ ಝಲಕ್” ಸಮುದಾಯ ರೇಡಿಯೋ ಸ್ಥಾಪಕಿ ಶಮಂತ ಡಿ.ಎಸ್ ನಡೆಸಿಕೊಟ್ಟರು. ಅವಳ ಹೆಜ್ಜೆಯ ಸ್ಥಾಪಕಿ ಶಾಂತಲಾ ದಾಮ್ಲೆ ನಡೆಸಿಕೊಟ್ಟ “ಪಕ್ಷಗಳನ್ನು ಮೀರಿದ ರಾಜಕೀಯ” ಎಂಬ ಚರ್ಚೆಯಲ್ಲಿ ಗಿರಿಜಾ ವಿಜಯಕುಮಾರ್, ಕವಿತಾ ರೆಡ್ಡಿ, ಡಾ.ಸುಮಿತ್ರ ಅಯ್ಯಂಗಾರ್ ಮತ್ತು ವೇದ ಆಠವಲೆ ಪಾಲ್ಗೊಂಡಿದ್ದರು.
ಕನ್ನಡತಿ ಉತ್ಸವ ಆಚರಣೆಯ ವಿವರವಾದ ವರದಿ ಇಂಗ್ಲೀಷ್ ದಿನಪತ್ರಿಕೆ ‘ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾಗಿತ್ತು.