ಕನ್ನಡತಿ ಉತ್ಸವ - 2018
- Avala Hejje
- Dec 30, 2018
- 2 min read
Updated: Feb 28
2018ರ ಕನ್ನಡತಿ ಉತ್ಸವದ ಅಂಗವಾಗಿ ನನ್ನದೊಂದು ಕಥೆ ಎಂಬ ಶೀರ್ಷಿಕೆಯಡಿಯಲ್ಲಿ ಕಿರುಚಿತ್ರೋತ್ಸವ ನಡೆಸಲಾಗಿತ್ತು. ಮಹಿಳೆಯರು ತಮ್ಮ ಕಥೆಗಳನ್ನು ಧೈರ್ಯವಾಗಿ ಹೇಳಲು ಶುರುಮಾಡಿದಾಗ ಮಾತ್ರ ಸಮಾಜದ ಪೂರ್ಣ ಚಿತ್ರಣ ಸಿಗುವುದು ಮತ್ತು ನಿಜವಾದ ಸಮಾನತೆಯತ್ತ ಹೆಜ್ಜೆಯಾಗುವುದು ಎಂಬ ಭರವಸೆಯೊಂದಿಗೆ ಮಹಿಳೆಯರೇ ತಯಾರಿಸಿದ ಕಿರುಚಿತ್ರಗಳ ಪ್ರದರ್ಶನಕ್ಕೆ ಆಹ್ವಾನ ನೀಡಲಾಗಿತ್ತು.
ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಐದು ಕಡೆ ಜರುಗಿದ ಕನ್ನಡತಿ ಉತ್ಸವದಲ್ಲಿ ಸುಮಾರು 500 ಕ್ಕಿಂತ ಹೆಚ್ಚು ಜನರು, ಮುಖ್ಯವಾಗಿ ಮಹಿಳೆಯರು, ಭಾಗವಹಿಸಿದ್ದರು. ಪ್ರತೀ ಸ್ಥಳದಲ್ಲಿಯೂ ಮಹಿಳೆಯರು ತಯಾರಿಸಿದ ಕಿರುಚಿತ್ರಗಳ ಪ್ರದರ್ಶನದೊಂದಿಗೆ ಸ್ತ್ರೀ ನೋಟದ ಪ್ರಸ್ತುತಿಯ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
2018 ರ ಕನ್ನಡತಿ ಉತ್ಸವದಲ್ಲಿ ಪ್ರದರ್ಶಿಸಲಾದ ಕಿರುಚಿತ್ರಗಳು:
ದರೋಜಿ – ರಚನೆ ಹಾಗು ನಿರ್ದೇಶನ, ಸುಗಂಧಿ ಗದಾಧರ
ಅಪ್ರಾಪ್ತ – ರಚನೆ ಹಾಗು ನಿರ್ದೇಶನ, ಕ್ಷೇಮಾ ಬಿ ಕೆ
ಜೀವನ ರೇಖೆ – ರಚನೆ ಹಾಗು ನಿರ್ದೇಶನ, ಸವಿತಾ ಇನಾಂದಾರ್
ಕಾಜಿ – ರಚನೆ ಹಾಗು ನಿರ್ದೇಶನ, ಐಶನಿ ಶೆಟ್ಟಿ
ದಾಳಿ – ನಿರ್ದೇಶನ, ಮೇದಿನಿ ಕೆಳಮನೆ
ಅನಲ, ನಿರ್ದೇಶನ, ಸಂಜ್ಯೋತಿ ವಿ ಕೆ
ಬೆಳ್ಳಿ ತಂಬಿಗೆ – ನಿರ್ಮಾಪಕ ತಂಡ: ಮಹಿಮಾ ಗೌಡ, ಅನುಶ್ರೀ ಭರದ್ವಾಜ, ಹರಿಪ್ರಿಯಾ ಕೆ ರಾವ್, ಶ್ರದ್ಧಾ ಸುಮನ್
2018 ರ ಎರಡನೇ ವರ್ಷದ “ಕನ್ನಡತಿ ಉತ್ಸವ” ವನ್ನು ದಿನಾಂಕ 3 ನವೆಂಬರ್ ರಂದು ಬೆಂಗಳೂರಿನ ಗಾಂದಿಭವನದಲ್ಲಿ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಖ್ಯಾತ ಚಿತ್ರನಿರ್ಮಾಪಕಿ ಕವಿತಾ ಲಂಕೇಶ್ ಉತ್ಸವವನ್ನು ಉದ್ಘಾಟಿಸಿ, ಸಭಿಕರನ್ನು ಉದ್ದೇಶಿಸಿ ಮಾತನಾಡಿ ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಂಗವಾಗಿ ಕನ್ನಡತಿಯರ ಪಾತ್ರವನ್ನು ಸ್ಮರಿಸಲು ಮಹಿಳೆಯರೇ ತಯಾರಿಸಿದ ಹಲವು ಕಿರುಚಿತ್ರಗಳ ಪ್ರದರ್ಶನದ ಜೊತೆಗೆ ಪ್ರಾದೇಶಿಕ ಮಾಧ್ಯಮಗಳಲ್ಲಿ ‘ಸ್ತ್ರೀ ನೋಟ’ದ ಪ್ರಸ್ತುತಿ, ಪ್ರಾಮುಖ್ಯತೆ ಮತ್ತು ಸವಾಲುಗಳ ಕುರಿತು ಎರಡು ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಉತ್ಸವಕ್ಕೆ ಮೆರುಗು ತಂದುಕೊಟ್ಟಿತು.
ಅವಳ ಹೆಜ್ಜೆಯ ಸ್ಥಾಪಕಿ ಶಾಂತಲಾ ದಾಮ್ಲೆ ಅತಿಥಿಗಳನ್ನು ಸ್ವಾಗತಿಸುತ್ತಾ “ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ, ‘ಆಟದ ಮೈದಾನದಿಂದ ಬೋರ್ಡ್ ರೂಂ’ವರೆಗೂ, ಹೆಣ್ಣುಮಕ್ಕಳ ಪಾತ್ರ, ಕೊಡುಗೆಗಳ ಹೆಜ್ಜೆಗುರುತು ಇರಬೇಕೆಂಬುದು ‘ಅವಳ ಹೆಜ್ಜೆ’ಯ ಆಶಯ ಮತ್ತು ಧ್ಯೇಯ. ಅದಕ್ಕಾಗಿಯೇ, ತಮ್ಮ ವೃತ್ತಿಜೀವನದಲ್ಲಿ ಎದುರಿಸುವ ಅಡೆತಡೆ, ಅಗೋಚರ ಪಕ್ಷಪಾತಗಳನ್ನು ಮೆಟ್ಟುವ ಜಾಣ್ಮೆ ಮತ್ತು ಯಶಸ್ಸಿನ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಸಾಗಲು ಅಳವಡಿಸಿಕೊಳ್ಳಬೇಕಾದ ಕ್ರಿಯಾತ್ಮಕತೆಗಳ ತರಬೇತಿಯನ್ನು ಕಾಲೇಜು ವಿದ್ಯಾರ್ಥಿನಿಯರಿಗೆ ‘ಅವಳ ಹೆಜ್ಜೆ’ ನೀಡುತ್ತದೆ.” ಎಂದರು.
ಪ್ರಥಮ ಸಂವಾದವನ್ನು ಲೇಖಕಿ ಹಾಗು ರೇಡಿಯೋ ಜಾಕಿಯಾಗಿರುವ ಶೃತಿ ಶಾರದಾ ನಡೆಸಿಕೊಟ್ಟರು ಮತ್ತು ಕವಿತಾ ಲಂಕೇಶ್ ಅವರೊಂದಿಗೆ ಚಲನಚಿತ್ರ, ಟಿವಿ ಹಾಗು ರಂಗಕರ್ಮಿಯಾಗಿರುವ ಮಲ್ಲಿಕಾ ಪ್ರಸಾದ್ ಮತ್ತು ಲೇಖಕ ಜೋಗಿ ಚರ್ಚೆಯಲ್ಲಿ ಭಾಗವಹಿಸಿದ್ದರು.
ಅವಳ ಹೆಜ್ಜೆಯ ಸೃಜನಾತ್ಮಕ ನಿರ್ದೇಶಕಿ ಲೇಖಾ ನಾಯ್ಡುರವರು ‘ಸ್ತ್ರೀ ನೋಟ’ದ ಪ್ರಸ್ತುತಿ ಮತ್ತು ಚರ್ಚಿಸಬೇಕಾದ ಅಗತ್ಯವನ್ನು ವಿವರಿಸುತ್ತಾ, “ಮಾಧ್ಯಮಗಳು ಹೆಚ್ಚಾಗಿ ಪುರುಷರ ಹತೋಟಿಯಲ್ಲಿರುವುದರಿಂದ ಪಿತೃಪ್ರಭುತ್ವದ ಕಲ್ಪನೆಯ ಚಿತ್ರಣವಷ್ಟೇ ಸಮಾಜಕ್ಕೆ ಸಿಗುತ್ತಿದೆ. ಹೀಗಾಗಿ ‘ಪುರುಷ ನೋಟ’ ಅಂದರೆ ಪುರುಷ ಪಾತ್ರಗಳು ಮತ್ತು ಪುರುಷ ವೀಕ್ಷಕರ ಅಭಿರುಚಿ, ದೃಷ್ಟಿಕೋನಕ್ಕೆ ಪೂರಕವಾಗಿ ಮಾತ್ರವೇ ಚಲನಚಿತ್ರ ಮಾಧ್ಯಮ ರೂಪಿತಗೊಂಡಿದೆ. ಇದಕ್ಕೆ ತದ್ವಿರುದ್ಧವಾಗಿ, ಸ್ತ್ರೀ ವೀಕ್ಷಕರ ನೋಟ ಮತ್ತು ಮಹಿಳೆಯರ ನಿರ್ಮಾಣ, ನಿರ್ದೇಶನದಲ್ಲಿ ಭಿನ್ನವಾದ ಚಿತ್ರಣ ಹೆಚ್ಚು ಹೊರಬರಲು ಸಾಧ್ಯವಿದೆ. ಹೆಚ್ಚು ಹೆಚ್ಚು ಮಹಿಳೆಯರು ಜನಪ್ರಿಯ ಸಿನಿಮಾ ಮತ್ತು ಮಾಧ್ಯಮಗಳಲ್ಲಿ ತೊಡಗಿಸಿಕೊಂಡಷ್ಟೂ, ಸ್ತ್ರೀಯರ ದೃಷ್ಟಿಕೋನ ಸಹಾ ನಮ್ಮ ಸಮಾಜ, ಸಂಸ್ಕೃತಿಯ ಭಾಗವಾಗುತ್ತದೆ. ಸಮಾಜದ ಉನ್ನತಿಗೆ ಪೂರಕವಾಗುತ್ತದೆ” ಎಂದರು.
ಕಾರ್ಯಕ್ರಮದ ಎರಡನೇ ಸಂವಾದವನ್ನು ಲೇಖಾ ನಾಯ್ಡು ನಡೆಸಿಕೊಟ್ಟರು. ‘ಪರಿಕ್ರಮಣೆ: ಕಥೆಯಿಂದ ಪರದೆಯವರೆಗೆ’ ಎಂಬ ವಿಷಯದ ಮೇಲೆ ಚಲನಚಿತ್ರ ನಿರ್ಮಾಪಕಿಯರಾದ ಅನನ್ಯಾ ಕಾಸರವಳ್ಳಿ, ರೂಪಾ ರಾವ್, ಸಂಜ್ಯೋತಿ ವಿ ಕೆ ಮತ್ತು ಪದ್ಮಲತ ರವಿ ಭಾಗವಹಿಸಿ, ಚಿತ್ರ ನಿರ್ಮಾಣದ ಸಾಹಸೋದ್ಯಮದಲ್ಲಿ ತಾಂತ್ರಿಕತೆ, ತಂಡ ರಚನೆ ಇತ್ಯಾದಿ ಹಂತಗಳಲ್ಲಿ ಮಹಿಳೆಯರು ಎದುರಿಸಬೇಕಾದ ವಿಶಿಷ್ಟ ಸವಾಲುಗಳ ಬಗ್ಗೆ ಚರ್ಚೆ ಮಾಡಲಾಯಿತು.
ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ
ಮೈಸೂರಿನ ಇನ್ಫೋಸಿಸ್ ಸಂಸ್ಥೆಯು ತನ್ನ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡತಿ ಉತ್ಸವವನ್ನು ಆಚರಿಸಲು ಅವಳಹೆಜ್ಜೆ ತಂಡವನ್ನು ಆಮಂತ್ರಿಸಿತು. ಕಿರುಚಿತ್ರಗಳ ಪ್ರದರ್ಶನದ ಜೊತೆ ‘ಸ್ತ್ರೀ ನೋಟ’ದ ಪ್ರಸ್ತುತಿ, ಪ್ರಾಮುಖ್ಯತೆ ಮತ್ತು ಸವಾಲುಗಳ ಕುರಿತು ಚರ್ಚೆಯನ್ನು ಏರ್ಪಡಿಸಲಾಗಿತ್ತು. ಪತ್ರಕರ್ತೆ ಮತ್ತು ರಂಗಕರ್ಮಿಯಾದ ಮೈಸೂರಿನ ಪ್ರೀತಿ ನಾಗರಾಜ್ ನಡೆಸಿಕೊಟ್ಟ ಚರ್ಚೆಯಲ್ಲಿ ಇನ್ಫೋಸಿಸ್ ನ ಅರುಣ ನ್ಯೂಟನ್ ಮತ್ತು ಅನಿತಾ ಶ್ರೀನಿವಾಸಯ್ಯ ಅವರೊಂದಿಗೆ ಶಿಲ್ಪಿ ಮತ್ತು ಚಿತ್ರ ನಿರ್ದೇಶಕಿಯಾದ ಮೈಸೂರಿನ ಡಾ. ಬಿ.ಆರ್. ಗೀತಾಂಜಲಿ ಭಾಗವಹಿಸಿದ್ದರು.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಸಹಯೋಗದಲ್ಲಿ ಡಿಸೆಂಬರ್ 1 ರಂದು ಜರುಗಿದ ಕನ್ನಡತಿ ಉತ್ಸವದಲ್ಲಿ ಕಿರುಚಿತ್ರ ಪ್ರದರ್ಶನದ ಜೊತೆ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಮೇಟಿ ಮಲ್ಲಿಕಾರ್ಜುನ ಮತ್ತು ಡಾ. ಸಬಿತ ಬನ್ನಾಡಿ ಭಾಗವಹಿಸಿದ್ದರು. ಬೆಂಗಳೂರಿನ ರಂಗಭೂಮಿ ಕಲಾವಿದೆ ರಶ್ಮಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮುಖ್ಯ ಭಾಷಣ ಮಾಡಿದರು.
ವಿಜಯಪುರದ ಅಕ್ಕ ಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ
ವಿಜಯಪುರದ ಅಕ್ಕ ಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಡಿಸೆಂಬರ್ 4 ರಂದು ಜರುಗಿದ ಕನ್ನಡತಿ ಉತ್ಸವವನ್ನು ಉಪಕುಲಪತಿಗಳಾದ ಪ್ರೊ.ಸಬೀಹ ಭೂಮಿಗೌಡ ಉದ್ಘಾಟಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಪತ್ರಿಕಾ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಓಂಕಾರ್ ಕಾಕಡೆ, ಸಾಮಾಜಿಕ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್. ಎ. ಖಾಜಿ, ಅಹಲ್ಯಭಾಯಿ ಮಹಿಳಾ ಉನ್ನತ ಶಿಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ಪ್ರೊ.ಸುನಂದಮ್ಮ, ದು.ಸರಸ್ವತಿ ಭಾಗವಹಿಸಿದ್ದರು. ಸಿನಿಮಾ ನಿರ್ಮಾಪಕಿ ಹಾಗೂ ಕಲ್ಬುರ್ಗಿಯ ಉದ್ಯಮಿ ಶ್ರುತಿ ಕುಲಕರ್ಣಿ ಸಭೆಯನ್ನು ಕುರಿತು ಮುಖ್ಯ ಭಾಷಣ ಮಾಡಿದರು.
ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ
2018 ರ ಕಡೆಯ ಕನ್ನಡತಿ ಉತ್ಸವವನ್ನು ಡಿಸೆಂಬರ್ 4 ರಂದು ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ ನಡೆಸಲಾಯಿತು. ಕಿರುಚಿತ್ರ ಪ್ರದರ್ಶನದ ನಂತರದ ಸಂವಾದ ಕಾರ್ಯಕ್ರಮದಲ್ಲಿ ಡಾ. ಸುದೇಶ್ನ ಮುಖರ್ಜಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕನ್ನಡತಿ ಉತ್ಸವ ಆಚರಣೆಯ ವಿವರವಾದ ವರದಿ ಪ್ರಜಾವಾಣಿ, ಕನ್ನಡಪ್ರಭ, ವಿಶ್ವವಾಣಿ ಮತ್ತು ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.