ಕನ್ನಡತಿ ಉತ್ಸವ - 2019
- Avala Hejje
- Dec 24, 2019
- 2 min read
Updated: Feb 28
ಮೂರನೇ ವರ್ಷದ ಕನ್ನಡತಿ ಉತ್ಸವದ ನಿಮಿತ್ತ ಸ್ತ್ರೀ ನೋಟ ವಿಷಯಾಧಾರಿತ ಮಹಿಳಾ ಪ್ರಧಾನ, ಮಹಿಳೆಯರಿಂದಲೇ ರಚಿತವಾದ ಮತ್ತು ನಿರ್ದೇಶಿಸಲ್ಪಟ್ಟ ರಾಜ್ಯಮಟ್ಟದ ಅಂತರ-ಕಾಲೇಜು ಕಿರುನಾಟಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕರ್ನಾಟಕದ ಹಲವಾರು ಕಾಲೇಜುಗಳು ನೋಂದಾಯಿಸಿ ಕೊಂಡಿದ್ದವು. ಮೊದಲ ಹಂತದಲ್ಲಿ ಆಡಿಷನ್ ಮೂಲಕ ಕಾಲೇಜುಗಳನ್ನು ಆಯ್ಕೆ ಮಾಡಲಾಗಿತ್ತು. ಅಂತಿಮ ಸುತ್ತಿಗೆ ಅರ್ಹತೆ ಪಡೆದ ನಾಲ್ಕು ತಂಡಗಳು ನವೆಂಬರ್ ಮೂರರಂದು ಸುಚಿತ್ರಾ ಫಿಲ್ಮ್ ಸೊಸೈಟಿಯ ನಾಣಿ ಅಂಗಳದಲ್ಲಿ ಜರುಗಿದ ಕನ್ನಡತಿ ಉತ್ಸವದಲ್ಲಿ ಪ್ರದರ್ಶನ ನೀಡಿದ್ದವು.
ಕಾರ್ಯಕ್ರಮದ ಉದ್ಘಾಟನೆಯನ್ನು ‘ನಾತಿಚರಾಮಿ’ ಖ್ಯಾತಿಯ ಶರಣ್ಯಾರವರು ನೆರವೇರಿಸಿದ್ದರು. ಸಾಹಿತಿ, ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕರಾದ ಬಿ.ಸುರೇಶರವರು ಸಹ ಉಪಸ್ಥಿತರಿದ್ದರು.
ಉದ್ಘಾಟನೆಯ ನಂತರ ಕವಯತ್ರಿ ಅನುರಾಧ ತುಳಸಿಯವರು ‘ಸ್ತ್ರೀನೋಟದ ಗೀಗಿಪದ’ವನ್ನು ರಚಿಸಿ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಲವಲವಿಕೆಯನ್ನು ಕಟ್ಟಿಕೊಟ್ಟರು. ನಂತರ ಕಿರುನಾಟಕಸ್ಪರ್ಧೆ ಆರಂಭವಾಯಿತು.
ಪ್ರಥಮ ಬಹುಮಾನವನ್ನು ಬೇಲೂರು ರಘುನಂದನ್ ರವರ ಮಾರ್ಗದರ್ಶನದಲ್ಲಿ ವಿಜಯನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ದೀಪಿಕಾ ರವರ ನಿರ್ದೇಶನದಲ್ಲಿ ಮೂಡಿಬಂದ ತಾಯಿಮಗಳು ಎಂಬ ಮಂಗಳಮುಖಿಯೋರ್ವಳ ತಾಯಿಹೃದಯದ ಸೂಕ್ಷ್ಮ ಕಥಾವಸ್ತುವುಳ್ಳ ಕಿರುನಾಟಕವು ಪಡೆಯಿತು.
ದ್ವಿತೀಯ ಬಹುಮಾನವನ್ನು ಹೆಜ್ಜೆ ರಂಗತಂಡದ ಕವಿತಾಬಾಯಿ ಎಲ್ ಬಿ ರವರ ನಿರ್ದೇಶನದಲ್ಲಿ ಮತ್ತು ಸಹಪಾಠಿಗಳ ಮಾರ್ಗದರ್ಶನದಲ್ಲಿ ರಚಿತವಾದ ಮಹಿಳಾ ಉದ್ಯೋಗಿಗಳಿಗೆ ಎದುರಾಗುವ ಸವಾಲುಗಳನ್ನೊಳಗೊಂಡ ನಾಟಕ ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ಪಡೆಯಿತು.
ಪೀಣ್ಯಾ ಪ್ರಥಮದರ್ಜೆ ಕಾಲೇಜಿನ ಪ್ರಾದ್ಯಾಪಕಿ ಶ್ರುತಿ ತಲನೇರಿಯವರ ಮಾರ್ಗದರ್ಶನದಲ್ಲಿ ಶ್ವೇತಾ ಕೆ ಎಸ್ ಮತ್ತು ಸೌಮ್ಯ ಜೆ ರವರ ಸಹಭಾಗಿತ್ವದಲ್ಲಿ, ರಚಿತವಾದ ದನಿ ಎಂಬ ಕುಟುಂಬದ ಒಳಗೇ ಜರುಗುವಂತ ಹೆಣ್ಣುಮಕ್ಕಳ ಲೈಂಗಿಕ ಕಿರುಕುಳದ ಸೂಕ್ಷ್ಮ ವಿಷಯದ ಬಗ್ಗೆ ಎಣೆದಿರುವ ಕಥಾವಸ್ತುವುಳ್ಳ ನಾಟಕ ತೃತೀಯ ಬಹುಮಾನ ಪಡೆದವು.
ಕನಕಪುರ ಕೋಡಿಹಳ್ಳಿಯ ಪ್ರಥಮದರ್ಜೆ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಶಿಲ್ಪ ಬೆನಗೆರೆಯರವ ನೇತೃತ್ವದಲ್ಲಿ ವಿದ್ಯಾರ್ಥಿನಿಯರಿಂದ ಪ್ರದರ್ಶಿತವಾದ #ಮಾಧವಿ ನಾಟಕವು ಸಮಾಧಾನಕರ ಬಹುಮಾನವನ್ನು ಪಡೆದವು.
ಈ ಸ್ಪರ್ಧೆಯ ತೀರ್ಪುಗಾರರಾಗಿ ರಂಗಭೂಮಿಯ ನುರಿತ ಕಲಾವಿದರಾದ ರಂಗಪಯಣ ಸಂಸ್ಥೆಯ ನಯನಸೂಡರವರು, ಹಿರಿಯ ರಂಗಭೂಮಿ ಕಲಾವಿಕೆ ಶ್ರೀ ದಾಕ್ಷಾಯಣಿ ಭಟ್ ರವರು, ವಸ್ತ್ರ ವಿನ್ಯಾಸಕಿ ರೂಪಾಗೌಡ ಮತ್ತು ಅವಳಹೆಜ್ಜೆಯ ಸೃಜನಾತ್ಮಕ ನಿರ್ದೇಶಕಿ ಲೇಖಾನಾಯ್ಡುರವರು ಭಾಗವಹಿಸಿದ್ದರು.
ಗೆದ್ದ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಫಿ ಜೊತೆಗೆ, ಭಾಗವಹಿಸಿದ ಎಲ್ಲಾ ಕಾಲೇಜುಗಳಿಗೂ ಅವಳಹೆಜ್ಜೆ ವತಿಯಿಂದ ಮಹಿಳಾ ಸಬಲೀಕರಣ ಮತ್ತು ಕೌಶಲ್ಯಾಭಿವೃದ್ಧಿ ಸಂಬಂಧಿಸಿದ ಒಂದು ದಿನದ ಉಚಿತ ಕಾರ್ಯಾಗಾರದ ಆಶ್ವಾಸನಾ ಪತ್ರವನ್ನು ಕೊಡಲಾಯಿತು.
ಕಿರುನಾಟಕ ಸ್ಪರ್ಧೆಯ ನಂತರ ಸಂಸ್ಥೆಯ ಸ್ಥಾಪಕರಾದ ಶಾಂತಲಾದಾಮ್ಲೆಯವರು ಸ್ತ್ರೀನೋಟ ವಿಷಯಾಧಾರಿತ ಸಂವಾದ ನಡೆಸಿಕೊಟ್ಟರು. ನಟಿ ಶರಣ್ಯ, ಮಾನಸಿಕ ತಜ್ಞೆ ಪದ್ಮಾಕ್ಷಿ ಲೋಕೇಶ್, ನಯನ ಸೂಡ ಮತ್ತು ದಾಕ್ಷಾಯಣಿ ಭಟ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕನ್ನಡತಿ ಉತ್ಸವಕ್ಕೆ ಪೂರಕವಾಗಿ ನವೆಂಬರ್ 1 ನೇ ತಾರೀಕಿನಂದು ಕನ್ನಡ ರಾಜ್ಯೋತ್ಸವದ ನಿಮಿತ್ತ ಮಹಿಳೆಯರಿಂದ ಧ್ವಜಾರೋಹಣದ ಛಾಯಾಚಿತ್ರ ಸಂಗ್ರಹದ ವಿಶೇಷ ಅಭಿಯಾನಕ್ಕೆ ಕರೆ ನೀಡಲಾಗಿತ್ತು. ಮಾನಸಿಕ ಸಲಹೆಗಾರರಾದ ಆಶಾ ವಿಶ್ವನಾಥ್, ಅಬಕಾರಿ ಇನ್ಸ್ ಪೆಕ್ಟರ್ ಸುಮಾ ರಾಮಚಂದ್ರ, ದೇವಿಕಾ ಭೂಷಣ್ ಮತ್ತಿತರರೂ ಸೇರಿದಂತೆ ಧ್ವಜಾರೋಹಣ ಮಾಡಿದ ಛಾಯಾಚಿತ್ರಗಳನ್ನು ಕನ್ನಡತಿ ಉತ್ಸವದಂದು ಪ್ರದರ್ಶನಕ್ಕೆ ಇಡಲಾಗಿತ್ತು.ಸಂಗ್ರಹವಾದ ಛಾಯಾಚಿತ್ರಗಳನ್ನು ಕನ್ನಡತಿ ಉತ್ಸವದಂದು ಪ್ರದರ್ಶನಕ್ಕೆ ಇಡಲಾಗಿತ್ತು.
ಕನ್ನಡತಿ ಉತ್ಸವ ಆಚರಣೆಯ ವಿವರವಾದ ವರದಿ ಪ್ರಜಾವಾಣಿ, ವಿಜಯ ಕರ್ನಾಟಕ ಮತ್ತು ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.