top of page

ಕನ್ನಡತಿ ಉತ್ಸವ - 2020

  • Writer: Avala Hejje
    Avala Hejje
  • Nov 24, 2020
  • 2 min read

Updated: Feb 28

ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ


ನಾಲ್ಕನೇ ವರ್ಷದ ಕನ್ನಡತಿ ಉತ್ಸವವನ್ನು ಅನಿರೀಕ್ಷಿತ ಜಾಗತಿಕ ದುರಂತದ ಹಿನ್ನೆಲೆಯಲ್ಲಿ, ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂಬ ಶೀರ್ಷಿಕೆಯಡಿ ಮಹಿಳಾ ನಾಯಕತ್ವದ ಹಾದಿಯಲ್ಲಿನ ಹಲವಾರು ಸವಾಲುಗಳು ಮತ್ತು ಯಶಸ್ಸುಗಳ ಕುರಿತಂತೆ, ನವೆಂಬರ್ 6 ರಿಂದ 8 ರವರೆಗೆ ಮೂರು ದಿನಗಳ ವೆಬಿನಾರ್ ಸಮಾವೇಶದೊಂದಿಗೆ ಆಚರಿಸಲಾಯಿತು.


ಸಿಂಗಾಪುರದ ಪೇಪಾಲ್ ಸಂಶ್ಥೆಯ ಪ್ರಿನ್ಸಿಪಾಲ್ ಪ್ರೊಗ್ರಾಮ್ ಮ್ಯಾನೇಜರ್, ಹೊರನಾಡ ಕನ್ನಡತಿ ವೈಶಾಲಿ ಪಾಂಡಿಯವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ರಾಜ್ಯದ ಬೇರೆ ಬೇರೆ ಕ್ಷೇತ್ರದ ಹತ್ತು ಸಾಧಕಿಯರು ಪಾಲ್ಗೊಂಡಿದ್ದು ಹಲವಾರು ವಿಷಯಗಳನ್ನು ಹಂಚಿಕೊಂಡರು.




ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ. ಎಚ್ ಎಮ್ ಹೇಮಲತಾರವರು “ವಲಸೆ ಮಹಿಳೆಯರು” ಕುರಿತಂತೆ ವಿಷಯ ಮಂಡನೆ ಮಾಡುತ್ತಾ, ಸಮಾಜದ ಕೆಳಸ್ಥರದಲ್ಲಿ ಕುಟುಂಬ ಕಟ್ಟುವ, ಬಡತನದ ಜೊತೆಗೆ ಹೋರಾಡುತ್ತಲೇ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸುವ ವಲಸೆ ಮಹಿಳೆಯರ ಗಟ್ಟಿತನದ ಬಗ್ಗೆ ಮಾತನಾಡಿದರು.


ವೃತ್ತಿಪರ ಕೌನ್ಸಿಲರ್ ವಂದನಾ ಶಾಸ್ತ್ರಿಯವರು “ಮಹಿಳೆಯರಲ್ಲಿ ಸಾಮರ್ಥ್ಯದ ಪ್ರೇರಣೆ” ಎಂಬ ವಿಷಯವನ್ನು ಮಂಡಿಸುತ್ತಾ ಸ್ತ್ರೀಯರಲ್ಲಿ ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಮತ್ತು ಇಚ್ಛಾಶಕ್ತಿ ಎನ್ನುವ ತ್ರಿಶಕ್ತಿ ಸೂತ್ರದ ಬಗ್ಗೆ ಮಾತನಾಡಿದರು.


ಉದಯೋನ್ಮುಖ ಫೋಟೋಗ್ರಾಫರ್ ನವ್ಯಾ ಕಡಮೆಯವರು “ಫೋಟೋಗ್ರಫಿ ಜರ್ನಿ” ಎಂಬ ವಿಷಯವನ್ನೂ ಹಂಚಿಕೊಳ್ಳುತ್ತಾ ಮುಟ್ಟಿನ ಕಾರಣಕ್ಕೆ, ದೂರ ಪ್ರವಾಸದ ಕಾರಣಕ್ಕೆ ಹೆಣ್ಣುಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹತ್ತಿಕ್ಕುವ ಅಗತ್ಯವಿಲ್ಲ, ವಿಜ್ಞಾನ ತುಂಬಾ ಮುಂದುವರೆದಿದೆ, ಅದರ ಜೊತೆಗೇ ಹೆಣ್ಣು ವ್ಯಕ್ತಿಯಾಗಿ ಮುನ್ನಡೆಯಬೇಕು, ಎಂದು ಮಾತನಾಡಿದರು.


ಈ ಭಾನುವಾರ ಪತ್ರಿಕೆಯ ಸಹ ಸಂಪಾದಕಿ ಕುಶಲ ಸ್ವಾಮಿ ಯವರು “ಭಾರತದ ಮಹಿಳಾ ಮುಖ್ಯ ಮಂತ್ರಿಗಳು” ಎನ್ನುವ ವಿಷಯವನ್ನು ಮಂಡಿಸಿದರು. ಇದುವರೆಗೂ ಭಾರತದಲ್ಲಿ ಕೇವಲ 16 ಜನ ಮಹಿಳಾ ಮುಖ್ಯಮಂತ್ರಿಗಳಾಗಿದ್ದು, ಅದೂ ಸಹ ತುಂಬಾ ಜನರ ಗಮನಕ್ಕೂ ಬರದೇ ಇರದಿದ್ದುದು ಬಹಳ ಖೇದಕರ ವಿಷಯ. ಕರ್ನಾಟಕದಲ್ಲಿ ಈವರೆಗೂ ಒಬ್ಬ ಮಹಿಳೆಯೂ ಮುಖ್ಯ ಮಂತ್ರಿ ಗದ್ದುಗೆ ಏರದೇ ಇರುವುದು ಇಲ್ಲಿನ ಪುರುಷ ಪ್ರಧಾನ ಧೋರಣೆಯ ಹಂತವನ್ನು ನಮ್ಮ ಗಮನಕ್ಕೆ ತರುತ್ತದೆ ಎಂದು ವಿಷಾದ ವ್ಯಕ್ತ ಪಡಿಸಿದರು.


ಹಾವೇರಿಯ ಜನಪದ ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ರಾಜೇಶ್ವರಿ ರವಿ ಸಾರಂಗಮಠರವರು ಸಾಧಿಸುವ ಛಲ ಒಂದಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಮಾತನಾಡುತ್ತಾ ಅಂಗವಿಕಲರು, ಖೈದಿಗಳು ಮತ್ತು ಲಾಂಬಾಣಿ ತಾಂಡದವರ ಬದುಕಿನಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾ, ಜೀವನ ಶೈಲಿ ಮತ್ತು ಆರ್ಥಿಕವಾಗಿ ಸಬಲರಾಗುವಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸ ಹೇಗೆ ನೆರವಾಗುತ್ತಿದೆ ಎಂಬುದರ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.


ವಿಸ್ತಾರ ಫೌಂಡೇಷನ್ನಿನ ಚಿನ್ಮಯೀ ಪ್ರವೀಣ್ ರವರು “ವಾಣಿಜ್ಯೋದ್ಯಮದಲ್ಲಿ ಮಹಿಳೆಯರು” ಎನ್ನುವ ವಿಷಯ ಮಂಡಿಸುತ್ತಾ, ಮಹಿಳೆ ಮತ್ತು ಪುರುಷರು ಜೈವಿಕವಾಗಿ ವಿಭಿನ್ನ ಲಕ್ಷಣ ಉಳ್ಳವರಾಗಿದ್ದರೂ ಆಂತರಿಕ ಕೌಶಲ್ಯತೆಯಲ್ಲಿ, ಸೃಜನೆಶೀಲತೆಯಲ್ಲಿ, ಸಾಮರ್ಥ್ಯದಲ್ಲಿ ಆತ್ಮಸ್ವರೂಪಿಗಳು ಎಂದು ಮನ ಮುಟ್ಟುವ ಮಾತುಗಳನ್ನಾಡಿದರು.


ಪತ್ರಕರ್ತೆ, ಆಪ್ತ ಸಮಾಲೋಚಕಿ ಡಿ ಯಶೋಧಾರವರು ವಿಷಯ ಮಂಡನೆ ಮಾಡುತ್ತಾ “ಹೆಣ್ಣಿನ ಹೋರಾಟದ ಮನಸ್ಥಿತಿಯೇ, ಆಕೆಗೆ ನಿಜವಾದ ಚೈತನ್ಯ, ಆಕೆಗೆ ಬಾಹ್ಯ ಪ್ರೇರಣೆಗಳಿಗಿಂತ ಆಂತರಿಕ ಚೇತನವೇ ಶ್ರೀರಕ್ಷೆ” ಎಂದು ತಿಳಿಸಿದರು.


ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಧ್ಯಾಪಕಿ ಡಾ.ರೇಣುಕಾ ಮಂದ್ರೂಪರವರು ಜನವಾದಿ ಸಂಘಟನೆಯ ದೇವಿಯವರ ಹೋರಾಟಗಳು ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡುತ್ತಾ ಸಾವಿತ್ರಿಬಾಯಿ ಫುಲೆಯವರ ಜೀವನಾದರ್ಶದ ಬಗ್ಗೆಯೂ ಪ್ರಸ್ತಾಪಿಸಿದರು.


ಲೇಖಕಿ, ಕವಯತ್ರಿ ಮಮತಾ ಅರಸೀಕೆರೆಯವರು ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳೆಯರು ಆರ್ಥಿಕವಾಗಿ ಚೇತರಿಸಿಕೊಳ್ಳಲು, ಕುಟುಂಬವನ್ನು ಸರಿದೂಗಿಸಲು ಹೇಗೆ ಆನ್ ಲೈನ್ ಮಾರುಕಟ್ಟೆಯನ್ನು ಕಟ್ಟಿಕೊಂಡರು ಎಂಬುದರ ಅನುಭವವನ್ನು ಹಂಚಿಕೊಂಡರು.


ಕುಂಚ ಕಲಾವಿದೆ, ಕವಯತ್ರಿ ಶಾಂತಿವಾಸುರವರು ತಮ್ಮ ಸ್ವಂತ ಬದುಕನ್ನೇ ಮಾದರಿಯಾಗಿ, ತಾವು ಚಿತ್ರ ಕಲಾವಿದೆಯಾಗಿ, ಒಂದು ಶಾಲೆಯನ್ನು ಕಟ್ಟಿ ತಮ್ಮ ಪ್ರತಿಭೆಯ ಜೊತೆಜೊತೆಗೇ ಹಲವಾರು ಕಲಾವಿದರಿಗೆ ವೇದಿಕೆಯನ್ನು ನಿರ್ಮಿಸಿದರ ಬಗ್ಗೆ ಹಂಚಿಕೊಂಡರು.


ಅವಳಹೆಜ್ಜೆಯ ಮೊದಲ ಮತ್ತು ಪ್ರಮುಖ ಉದ್ದೇಶ ಮಹಿಳೆಯರ ಕಥೆಗಳನ್ನು ಮುಂಚೂಣಿಗೆ ತರುವುದು, ಗುರುತಿಸುವುದು ಮತ್ತು ಹಿನ್ನೆಲೆಗೆ ಮರೆಯಾಗದಂತೆ ತಡೆಯುವುದು. ಈ ನಿಟ್ಟಿನಲ್ಲಿ, ಈ ವರ್ಷ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಹಲವಾರು ಮಹಿಳಾ ನಾಯಕಿಯರು, ಸಾಧಕಿಯರು ತಮ್ಮ ಮತ್ತು ತಮ್ಮ ಸುತ್ತಮುತ್ತಲಿನ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳಲು ಕನ್ನಡತಿ ಉತ್ಸವ ಸಾಕ್ಷಿಯಾಗಿತ್ತು.


bottom of page