top of page

ಕನ್ನಡತಿ ಉತ್ಸವ - 2021

  • Writer: Avala Hejje
    Avala Hejje
  • Dec 15, 2021
  • 1 min read

Updated: Feb 28

ಅವಳಹೆಜ್ಜೆಯ 5ನೇ ವಾರ್ಷಿಕ ಹಬ್ಬ ಕನ್ನಡತಿ ಉತ್ಸವ 2021,ರಾಯಚೂರಿನ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ದಿನಾಂಕ 12/12/2021 ರ ಭಾನುವಾರ ಜರುಗಿತು.


ಅವಳಹೆಜ್ಜೆ ಸಂಸ್ಥೆಯ ರೂವಾರಿ ಶಾಂತಲಾ ದಾಮ್ಲೆಯವರ ನೇತೃತ್ವದಲ್ಲಿ, ರಾಯಚೂರು ಜಿಲ್ಲಾ ಅವಳಹೆಜ್ಜೆ ಘಟಕದ ಕಾರ್ಯಕ್ರಮ ಸಂಯೋಜಕಿ ಗಿರಿಜಾ ಅಕ್ಕಿ ಮತ್ತು ತಂಡದವರು, ಕಾರ್ಯಕ್ರಮದ  ಸಂಪೂರ್ಣ ಜವಾಬ್ದಾರಿ ಹೊತ್ತು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ವಿಯ ಬಾಷುಮಿಯ ಸಾಹುಕಾರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಸುಮಿತ್ರಾ ಪ್ಯಾಟಿಯವರು ವಹಿಸಿದ್ದರು.


ಈ ಬಾರಿಯ ಕನ್ನಡತಿ ಉತ್ಸವದಲ್ಲಿ "ಆಧುನಿಕ ಬೊಂಬೆ ಹಬ್ಬ" ದ ಮೂಲಕ ಸಮಕಾಲೀನ ಸಾಧಕಿಯರ, ಇತಿಹಾಸ ರಚಿಸಿದ ಮಾದರಿ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳನ್ನು ಪ್ರಸ್ತುತಿ ಪಡಿಸಲಾಯಿತು. ಬೊಂಬೆ ಪ್ರದರ್ಶನದ ಮಾಧ್ಯಮಕ್ಕೆ ಯಾವುದೇ ಮಿತಿ ಅಥವಾ ಕಟ್ಟುಪಾಡು ಇರಲಿಲ್ಲ. ಮರದ ಅಥವಾ ಲೋಹದ ಬೊಂಬೆಗಳು, ಮಣ್ಣಿನ ಬೊಂಬೆಗಳು, ಬಳಪದ ಕೆತ್ತನೆ, ರಟ್ಟುಗಳು, ಬಟ್ಟೆಯಿಂದ ತಯಾರಿಸಿದ್ದು, ನೆರಳು-ಬೆಳಕಿನ ಮಾದರಿ, ಸೈನ್ಸ್ ಎಕ್ಸಿಬಿಷನ್ ನಲ್ಲಿ ಬಳಸುವಂತಹ  ಆಧುನಿಕ ತಂತ್ರಜ್ಞಾನ ಮುಂತಾದ ವಿವಿಧ ವಿಧಾನಗಳನ್ನು ಹಾಗೂ ಅನಿಮೇಷನ್/ಕಾರ್ಟೂನ್ ಮಾದರಿಯನ್ನು ಸಹಾ ಬಳಸಲು ಉತ್ತೇಜಿಸಲಾಗಿತ್ತು.


ಬೆಂಗಳೂರಿನ ಪೂಜಾ ಹರೀಶ್ ರವರು ನಿರ್ಮಿಸಿದ ಕಾರ್ಟೂನ್ ಗೊಂಬೆಗಳ ವಿಡಿಯೋ ಡಾಕ್ಯುಮೆಂಟರಿ ಮಲ್ನಾಡಿನ ಭೂಮಿ ಹುಣ್ಣಿಮೆ ಪ್ರದರ್ಶನ ಮತ್ತು ಮಕ್ಕಳಿಂದ "ನನ್ನ ಮೆಚ್ಚಿನ ಮಹಿಳೆ" ಶೀರ್ಷಿಕೆಯಡಿ ಜರುಗಿದ ವೇಷಭೂಷಣ ಪ್ರದರ್ಶನ ಈ ವರ್ಷದ ಕನ್ನಡತಿ ಉತ್ಸವದ ವಿಶೇಷ.


ಆಧುನಿಕ ಬೊಂಬೆ ಹಬ್ಬ ಪ್ರದರ್ಶನದಲ್ಲಿ ಕಲಾವಿದೆ ರಾಜೇಶ್ವರಿ ಕೌಲಗಿಯವರ ಕೈಚಳಕದಲ್ಲಿ ಪ್ರಸ್ತುತ ಪಡಿಸಲಾದ ಬಿಜಾಪುರದ ಮಾದರಿ ಮಹಿಳೆ, ಲಂಬಾಣಿ ಸಮುದಾಯದ ಕಲಾ ಕೌಶಲ್ಯತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಚೆಲ್ಲಿದ, ಹಲವಾರು ಲಂಬಾಣಿ ಸಮುದಾಯದವರಿಗೆ ಸಾಮಾಜಿಕವಾಗಿ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾದ ಮಲ್ಲಮ್ಮ ಯಾಳವಾರ ಅವರ ಕಥೆಯ ಪ್ರಸ್ತುತಿ, ಎಲ್ಲರನ್ನೂ ಪ್ರೇರೇಪಿಸಿತ್ತು.  


ಮಾನ್ವಿ ಕಾಲೇಜು ವಿದ್ಯಾರ್ಥಿನಿಯರು,ದೇವದುರ್ಗ ತಾಲೂಕಿನ ಶಾಲಾ ಮಕ್ಕಳು ಬೊಂಬೆ ಜೋಡಣೆಗಳ ಮೂಲಕ ಹೇಳುವ ಕಥೆಗಳೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.



bottom of page