top of page

ಕನ್ನಡತಿ ಉತ್ಸವ - 2022

  • Writer: Avala Hejje
    Avala Hejje
  • Nov 15, 2022
  • 1 min read

Updated: Feb 28

ʼಅವಳ ಹೆಜ್ಜೆʼ ಯ 6 ನೇ ವಾರ್ಷಿಕ ಹಬ್ಬʼಕನ್ನಡತಿ ಉತ್ಸವʼ ವನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅತ್ಯಂತ ವಿಭಿನ್ನವೂ ವಿನೂತನವೂ ಆದ ʼಮಿಸ್‌ ಮಹಾಲಕ್ಷ್ಮೀʼ ರ್‍ಯಾಂಪ್ ವಾಕ್ ಮೂಲಕ ಆಚರಿಸಲಾಯಿತು. ಉತ್ಸವದ ನಿರ್ದೇಶಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ದೀಪದಮಲ್ಲಿ ಕಾವ್ಯನಾಮದ ದೀಪಾ ಗಿರೀಶ್ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ನಮ್ಮ ಸಮಾಜದಲ್ಲಿ ಅನೇಕ ಮಹಿಳೆಯರು ಕುಟುಂಬದ ಕಣ್ಣಾಗಿ ಮನೆಯ ಪ್ರತಿಯೊಬ್ಬ ಸದಸ್ಯರ ಆರೋಗ್ಯ, ಶಿಕ್ಷಣ, ವೃತ್ತಿಯನ್ನು ಪೋಷಿಸುತ್ತಾ ಎಲ್ಲರ ಹಿತದೊಳಗೆ ತಮ್ಮ ಸುಖ ಕಾಣುತ್ತಾರೆ. ಇನ್ನೂ ಅನೇಕ ಮಹಿಳೆಯರು ತಮ್ಮ ವೃತ್ತಿ ಹಾಗೂ ಕುಟುಂಬವನ್ನು ಸರಿದೂಗಿಸಿಕೊಂಡು ಹೋಗಲು ಸದಾ ಕಾಲ ಹೋರಾಡುತ್ತಿರುತ್ತಾರೆ. ಇವುಗಳ ಮಧ್ಯೆ ತಮ್ಮ ಕನಸು ಏನು? ತಮ್ಮ ಆಸಕ್ತಿ ಏನು? ತಮ್ಮೊಳಗಿನ ಕಲೆ ಏನು? ಪ್ರವೃತ್ತಿಯೇ ವೃತ್ತಿಯೂ ಆಗಬಹುದೇ? ದಿನನಿತ್ಯದ ಜಂಜಾಟಗಳ ನಡುವೆ ತಮ್ಮ ವೈಯಕ್ತಿಕ ಖುಷಿಗಾಗಿ ಕೆಲವು ಗಂಟೆ ಅಥವಾ ನಿಮಿಷಗಳನ್ನಾದರೂ ತೆಗೆದಿಡಬಹುದೇ? ಇಂತಹ ಹಲವು ಒಳನೋಟಗಳನ್ನು ಕೆದಕುವ ಒಂದು ಪ್ರಯತ್ನವಾಗಿತ್ತು ಈ ʼಮಿಸ್‌ ಮಹಾಲಕ್ಷ್ಮೀʼ ರ್‍ಯಾಂಪ್ ವಾಕ್!


PASSION SHOW – ಇದು ಫ್ಯಾಷನ್‌ ಶೋ ಅಲ್ಲ, ಪ್ಯಾಷನ್‌ ಶೋ!

ಪ್ಯಾಷನ್‌ ಶೋನಲ್ಲಿ 7 ವರ್ಷದಿಂದ ಮೊದಲುಗೊಂಡು 75 ವರ್ಷ ವಯೋಮಾನದವರೆಗಿನ ಮಹಿಳೆಯರು ತಮ್ಮ ತಮ್ಮ ಕನಸು, ಕಸುಬು ಮತ್ತು ಕಲೆಯನ್ನು ಕ್ರಿಯಾಶೀಲವಾಗಿ ವಿವಿಧ ಉಡುಗೆ ತೊಡುಗೆಗಳ ಮೂಲಕ ರ‍್ಯಾಂಪ್ ಮೇಲೆ ಪ್ರದರ್ಶಿಸಿದರು. ವೈದ್ಯೆ, ವಕೀಲೆ, ಫಾರ್ಮಾಸಿಸ್ಟ್, ಕೇಶ ವಿನ್ಯಾಸಕಿ, ಬಾಹ್ಯಾಕಾಶ ವಿಜ್ಞಾನಿ, ವನ್ಯಜೀವಿ ಛಾಯಾಗ್ರಾಹಕಿ, ಸಮಾಜ ಸೇವೆ, ಕಸೂತಿ, ಶಿಕ್ಷಣ, ಫ್ಯಾಷನ್‌ ಡಿಸೈನಿಂಗ್, ಮಾಡಲಿಂಗ್, ಜಿಮ್‌, ಯೋಗ, ಸಾಹಿತ್ಯ, ಗಾಯನ, ಭರತನಾಟ್ಯ, ಕಥಕ್‌, ಯಕ್ಷಗಾನ, ಚಿತ್ರಕಲೆ, ನಾಟಕ, ಟ್ರಕ್ಕಿಂಗ್‌, ಆಭರಣ ವಿನ್ಯಾಸ ಮುಂತಾದ ಕ್ಷೇತ್ರಗಳನ್ನು ಪ್ರತಿನಿಧಿಸಿದರು.


ಇದರೊಂದಿಗೆ, ʼಹಳೆ ಬೇರು ಹೊಸ ಚಿಗುರುʼ ಶೀರ್ಷಿಕೆಯಡಿ ಹೆಣ್ಣು ಸಂತತಿಯ ಮೂರು ನಾಲ್ಕು ತಲೆಮಾರಿನ ಒಂದೇ ಕುಟುಂಬದ ಮಹಿಳೆಯರು - ಅಜ್ಜಿ, ತಾಯಿ, ಮಗಳು, ಮೊಮ್ಮಗಳು ಹೀಗೆ ಹೆಣ್ಣು ತಲೆಮಾರು - ಒಟ್ಟಾಗಿ ರ‍್ಯಾಂಪ್ ಮೇಲೆ ನಡೆದು ತಮ್ಮ ಬಾಂಧವ್ಯವನ್ನು ಪ್ರದರ್ಶಿಸಿದರು.

bottom of page