ಸೋದರಿಕೆ ಸಂಕಲ್ಪ
- Avala Hejje
- Jan 1, 2025
- 1 min read
Updated: Feb 28
ಪುರುಷಪ್ರಧಾನ ಸಮಾಜವನ್ನು ಲಿಂಗಸಮಾನತೆಯುಳ್ಳ (ಅಂದರೆ ಮಹಿಳೆಯರು ಹಾಗು ಹೆಣ್ಣು ಮಕ್ಕಳಿಗೆ, ಪುರುಷರು ಹಾಗು ಗಂಡು ಮಕ್ಕಳಷ್ಟೇ ಸಮಾನ ಬೆಲೆ ನೀಡುವಂತಹ) ಸಮಾಜವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮಹಿಳೆಯರನ್ನು ಒಗ್ಗೂಡಿಸುವುದು ಸೋದರಿಕೆ ಪರಿಕಲ್ಪನೆಯ ಮೂಲ ಉದ್ದೇಶ.
ಆಡಳಿತ, ನ್ಯಾಯಾಂಗ, ರಾಜಕೀಯ, ನಿಗಮಗಳು, ಮಾಧ್ಯಮ, ಕಂಪೆನಿಗಳು ಮುಂತಾದ ಪ್ರಭಾವಿ ಅಂಗಗಳ ನಾಯಕತ್ವದಲ್ಲಿ, ತೀರ್ಮಾನಗಳಲ್ಲಿ ಲಿಂಗ ಸಮಾನತೆ ತರುವುದಕ್ಕಾಗಿ, ಸಮಾಜದ ಮತ್ತು ದೇಶದ ಆರ್ಥಿಕತೆಯ ಪೂರ್ಣ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಮತ್ತು ಮಹಿಳೆಯರು ಬೆಳೆಯಲು ಬಲವಾದ ಸಂಪರ್ಕ ಜಾಲಗಳು (ನೆಟ್‌ವರ್ಕ್) ಮಾತ್ರವಲ್ಲದೆ, ಪ್ರತಿಕೂಲತೆಯನ್ನು ಎದುರಿಸಲು ಬೆಂಬಲ ವ್ಯವಸ್ಥೆಗಳನ್ನು ನಿರ್ಮಿಸುವುದು ಸೋದರಿಕೆ ಯೋಜನೆಯ ಗುರಿ.
ಸೋದರಿಕೆ ಸಂಪರ್ಕ ಜಾಲ
ಮಹಿಳೆಯರು ಪರಸ್ಪರ ಬೆಂಬಲ, ಮಾರ್ಗದರ್ಶನ ನೀಡಲು ಮತ್ತು ಪಡೆಯಲು ಸೋದರಿಕೆ ಸಂಪರ್ಕ ಜಾಲ ಒಂದು ವೇದಿಕೆ. ಅನೇಕ ಮಹಿಳಾಪರ ಸಂಸ್ಥೆಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು ಸೋದರಿಕೆ ಸಂಪರ್ಕ ಜಾಲದೊಂದಿಗೆ ಕೈ ಜೋಡಿಸಿದ್ದಾರೆ.
ಬಳಗ
ಬಳಗ ಅಂದರೆ ಸೋದರಿಕೆ ಪರಿಕಲ್ಪನೆ ಅಡಿಯಲ್ಲಿ ಮಹಿಳೆಯರು ಪರಸ್ಪರ ಕಲಿಕೆ, ಬೆಳವಣಿಗೆ ಮತ್ತು ಬೆಂಬಲ ನೀಡಲು ರಚಿಸಿಕೊಳ್ಳುವ ಸಣ್ಣ ಗುಂಪು. ಬಳಗಗಳನ್ನು ಕಾಲೇಜು, ಕೆಲಸದ ಸ್ಥಳ, ವಸತಿ ಪ್ರದೇಶಗಳು, ವೃತ್ತಿಪರ ಸಂಘಗಳು, ಇತ್ಯಾದಿಗಳಲ್ಲಿ ರಚಿಸಬಹುದು. ತರಬೇತಿ ಪಡೆದ ಬಳಗದ ನಾಯಕಿಯರ ನೇತೃತ್ವದಲ್ಲಿ ಬಳಗದ ಸದಸ್ಯರು ನಿಯಮಿತವಾಗಿ, ಬಹುಶಃ ತಿಂಗಳಿಗೊಮ್ಮೆ, ಭೇಟಿಯಾಗುತ್ತಾರೆ.
ಪ್ರತಿ ಸಭೆಯಲ್ಲಿ ಸದಸ್ಯರು ಸೋದರಿಕೆಯ ಪ್ರತಿಜ್ಞೆಯನ್ನು ಪುನರುಚ್ಚರಿಸಿ, ಮನೆ, ಕೆಲಸ ಇತ್ಯಾದಿ ಸ್ಥಳಗಳಲ್ಲಿ ಲಿಂಗ ಸಂವೇದನೆ ಅರಿವು ಮೂಡಿಸುವ ಬಗ್ಗೆ ಪರಸ್ಪರ ಪರಿಶೀಲನೆೆ ಮಾಡುತ್ತಾರೆ, ಅಡೆತಡೆಗಳಿಗೆ ಪರಿಹಾರಗಳ ಕಂಡುಕೊಳ್ಳುವಲ್ಲಿ ಪರಸ್ಪರ ಬೆಂಬಲ ನೀಡುತ್ತಾರೆ. ಜೊತೆಗೆ, ಸಾರ್ವಜನಿಕ ವಿಷಯ ಮಂಡನೆಯ ಅಭ್ಯಾಸ, ವಿವಿಧ ವಿಷಯಗಳ ಬಗ್ಗೆ ಚರ್ಚೆ, ವಿಚಾರ ವಿನಿಮಯಗಳ ಮೂಲಕ ತಮ್ಮ ವ್ಯಕ್ತಿತ್ವ ವಿಕಸನವನ್ನು ಪಡೆಯುತ್ತಾರೆ. ಸೋದರಿಕೆ ಸಂಪರ್ಕಜಾಲಕ್ಕೆ ಸೇರಲು ಅಥವಾ ನಿಮ್ಮ ಬಳಗವನ್ನು ನೋಂದಾಯಿಸಲು ಸಂಪರ್ಕಿಸಿ.